ಕಲಬುರಗಿ: ವೆಂಟಿಲೇಟರ್ ಸಿಗದ ಪರಿಣಾಮ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ತಾಲೂಕಿನ ಹೊನ್ನಕಿರಣಗಿ ಗ್ರಾಮದ ನಿವಾಸಿ ಅಂಗನವಾಡಿ ಕಾರ್ಯಕರ್ತೆ ಅಕ್ಕನಾಗಮ್ಮ (50) ಮೃತ ಪಟ್ಟಿದ್ದು, ಲೋ ಬಿಪಿ, ಕೆಮ್ಮು ಮತ್ತು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಅವರನ್ನು ಜಿಮ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ವೆಂಟಿಲೇಟರ್ ಇಲ್ಲದ ಕಾರಣಕ್ಕೆ ಇ.ಎಸ್.ಐ.ಗೆ ಕರೆದೊಯ್ಯಲಾಗಿದ್ದು, ಅಲ್ಲಿಯೂ ವೆಂಟಿಲೇಟರ್ ಇಲ್ಲವೆಂದು ಸಿಬ್ಬಂದಿ ಹೇಳಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಎರಡು ಆಸ್ಪತ್ರೆಗಳ ನಂತರ ನಗರದ ಹಲವು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ತೀವ್ರ ಉಸಿರಾಟದ ತೊಂದರೆಯಿದ್ದ ಕಾರಣ, ಎಲ್ಲಿಯೂ ದಾಖಲಿಸಿಕೊಂಡಿಲ್ಲ. ರಾತ್ರಿಯೆಲ್ಲ ಅಕ್ಕನಾಗಮ್ಮ ಅವರನ್ನು ಆ್ಯಂಬುಲೆನ್ಸ್ನಲ್ಲಿ ಇಟ್ಟು ಸುತ್ತಾಡಿದರೂ ಪ್ರಯೋಜನವಾಗಿಲ್ಲ.
ಯಾವುದೇ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಿಗದೆ, ಕಡೆಗೆ ಇಂದು ನಸುಕಿನ ಜಾವ ಹೈದರಾಬಾದ್ಗೆ ಚಿಕಿತ್ಸೆಗೆಂದು ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಸಕಾಲಕ್ಕೆ ಚಿಕಿತ್ಸೆ ನೀಡದೆ ವೈದ್ಯರು ತೋರಿರುವ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದು, ಮಹಿಳೆ ಸಾವನ್ನಪ್ಪಿದ ನಂತರ ಗಂಟಲ ದ್ರವ ತೆಗೆದುಕೊಂಡು ಲ್ಯಾಬ್ಗೆ ರವಾನಿಸಲಾಗಿದೆ.