ಕಲಬುರಗಿ: ನಗರದ ಐತಿಹಾಸಿಕ ಕೋಟೆಯೊಳಗೆ ಅನಧಿಕೃತವಾಗಿ ವಾಸವಾಗಿರುವ 282 ಕುಟುಂಬಗಳು ಅಕ್ರಮವಾಗಿ ಕಟ್ಟಿಕೊಂಡಿರುವ ಕಟ್ಟಡಗಳನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿ ಬಿ. ಶರತ್ ಆದೇಶದ ಮೂಲಕ ತಿಳಿಸಿದ್ದಾರೆ.
1958ರ ನಿಯಮ 19ನೇ ಉಪ ನಿಯಮ (2) ರಂತೆ ಬೆಂಗಳೂರಿನ ಉಚ್ಚ ನ್ಯಾಯಾಲಯವು ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಂತೆ ನಿರ್ದೇಶನ ನೀಡಿದೆ. ಇದರ ಅನ್ವಯ ಈಗಾಗಲೆ ಜನವರಿ 31ರಂದು ಪತ್ರಿಕಾ ಪ್ರಕಟಣೆ ಸಹ ನೀಡಿ, ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಜಾಗ ಖಾಲಿ ಮಾಡುವಂತೆ ತಿಳಿಸಿದ್ದರೂ ಸಹ ಕಟ್ಟಡ ಮಾಲೀಕರು ಇದೂವರೆಗೆ ತೆರವುಗೊಳಿಸಿಲ್ಲ. ಒಂದು ವೇಳೆ ಕಟ್ಟಡ ಮಾಲೀಕರು ಅಕ್ರಮ ಕಟ್ಟಡ ತೆರವುಗೊಳಿಸಿ ಜಾಗ ಖಾಲಿ ಮಾಡದೆ ಇದ್ದಲ್ಲಿ ಜಿಲ್ಲಾಡಳಿತದಿಂದಲೆ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲಾಗುವುದು. ಅದಕ್ಕೆ ತಗಲುವ ವೆಚ್ಚವನ್ನು ಕಟ್ಟಡಗಳ ಮಾಲೀಕರಿಂದಲೇ ವಸೂಲಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.