ದಾವಣಗೆರೆ: ಹಾಡಹಗಲೇ ಉಪನ್ಯಾಸಕರೊಬ್ಬರ ಮನೆಗೆ ಖದೀಮರು ಕನ್ನ ಹಾಕಿ, ಚಿನ್ನಾಭರಣ ಮತ್ತು ನಗದು ಸೇರಿ 33.66 ಲಕ್ಷ ರೂ ಎಗರಿಸಿ ಎಸ್ಕೇಪ್ ಆಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಅಣ್ಣಮ್ಮ ಪ್ರೌಢಶಾಲೆಯ ಬಳಿಯ ಮನೆಯೊಂದರಲ್ಲಿ ನಡೆದಿದೆ. ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಸಿದ್ದೇಶ್ವರಪ್ಪ ಎಂಬವರಿಗೆ ಸೇರಿದ ಮನೆಯಲ್ಲಿ ಕಳ್ಳತನ ಆಗಿದೆ.
ಮನೆ ಮಾಲೀಕರಾದ ಸಿದ್ದೇಶ್ವರಪ್ಪ ಅವರ ಪತ್ನಿಯು ಪ್ರೌಢ ಶಾಲೆಯಲ್ಲಿ ಸರ್ಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆ ತಮ್ಮ ಮನೆಗೆ ಬೀಗ ಹಾಕಿ ತಮ್ಮ ಪುತ್ರಿಯನ್ನು ದಾವಣಗೆರೆ ನಗರದ ಖಾಸಗಿ ಕಾಲೇಜಿಗೆ ಬಿಡಲು ತೆರಳಿದಾಗ ಘಟನೆ ನಡೆದಿದೆ. ಕಬ್ಬಿಣದ ಸರಳುಗಳನ್ನು ಕತ್ತರಿಸಿರುವ ಕಳ್ಳರು ಕಿಟಕಿಯ ಮೂಲಕ ಮನೆಯ ಬಾಗಿಲು ಮುರಿದು ಕೃತ್ಯ ಎಸಗಿದ್ದಾರೆ. ಹಗಲು ಹೊತ್ತಿನಲ್ಲೇ ಮನೆಗೆ ನುಗ್ಗಿದ ಕಳ್ಳರು ಬೀರುವಿನ ಬೀಗ ಒಡೆದು ಅದರಲ್ಲಿದ್ದ 15 ಲಕ್ಷ ರೂ ಮೌಲ್ಯದ ಚಿನ್ನಾಭರಣ, 17.80 ಲಕ್ಷ ರೂ ಮೌಲ್ಯದ ಬೆಳ್ಳಿ ಸೇರಿದಂತೆ 1.50 ಲಕ್ಷ ನಗದು ಹಣ ದೋಚಿ ಕಾಲ್ಕಿತ್ತಿದ್ದಾರೆ. ಉಪನ್ಯಾಸಕ ಸಿದ್ದೇಶ್ವರಪ್ಪ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಘಟನೆ ತಿಳಿದ ಡಿವೈಎಸ್ಪಿ ಸಂತೋಷ್ ಘಟನಾ ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಲಬುರಗಿಯಲ್ಲಿ ₹20 ಲಕ್ಷ ವಂಚನೆ: ಪ್ಲ್ಯಾಟ್ ಬಾಡಿಗೆಗೆ ಕೊಡುವುದಿದೆ ಎಂದು ಒಎಲ್ಎಕ್ಸ್ನಲ್ಲಿ ಜಾಹೀರಾತು ಹಾಕಿದ್ದ ವ್ಯಕ್ತಿಯೊಬ್ಬರಿಗೆ ಇಂಡಿಯನ್ ಆರ್ಮಿ ಆಫೀಸರ್ ಎಂದು ಸುಳ್ಳು ಹೇಳಿಕೊಂಡು ಕರೆ ಮಾಡಿದ ವಂಚಕರು ಪ್ಲ್ಯಾಟ್ ಮಾಲೀಕರಿಗೆ 20 ಲಕ್ಷ ರೂ.ಗಳಿಗೂ ಅಧಿಕ ಹಣ ಪಂಗನಾಮ ಹಾಕಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ಇಲ್ಲಿನ ಐವಾನ್ ಶಾಹಿ ಪ್ರದೇಶದ ನಿವಾಸಿ ಅಬ್ದುಲ್ ಖದೀರ್ ಹಣ ಕಳೆದುಕೊಂಡವರು.
ಸೌದಿ ಅರೇಬಿಯಾದಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡಿದ ಅಬ್ದುಲ್ ಖದೀರ್ ಇತ್ತೀಚಿಗೆ ವಯೋಸಹಜ ನಿವೃತ್ತಿ ನಂತರ ಕಲಬುರಗಿಯಲ್ಲಿ ಕುಟುಂಬದ ಜೊತೆ ವಾಸವಾಗಿದ್ದಾರೆ. ನಗರದ ಹಳೆ ಜೇವರ್ಗಿ ರಸ್ತೆಯ ಪಿಡಬ್ಲೂಡಿ ಕಚೇರಿ ಪಕ್ಕದಲ್ಲಿ ಎಸ್ಆರ್‌ಸಿ ಎಂಬ ಕಟ್ಟಡದಲ್ಲಿ ಮೂರನೇ ಅಂತಸ್ತಿನಲ್ಲಿದ್ದ ಇವರ ಒಂದು ಪ್ಲ್ಯಾಟ್ ಬಾಡಿಗೆ ಕೊಡುವುದಿತ್ತು. ಅದಕ್ಕಾಗಿ ಅಬ್ದುಲ್ ಖದೀರ್ ಅವರ ಪುತ್ರ ಅಬ್ದುಲ್ ಮಲಿಕ್ ಓಎಲ್ಎಕ್ಸ್ನಲ್ಲಿ ಬಾಡಿಗೆ ಕೊಡುವುದಿದೆ ಎಂದು ಜಾಹೀರಾತು ನೀಡಿದ್ದರು.
ಜುಲೈ 21ರಂದು ಅಬ್ದುಲ್ ಮಲಿಕ್ ಅವರಿಗೆ ಕರೆ ಮಾಡಿದ ವಂಚಕ, ನಾನು ಸಂದೀಪ್ ರಾವತ್ ಇಂಡಿಯನ್ ಆರ್ಮಿ ಆಫೀಸರ್ ಆಗಿದ್ದು ನನಗೆ ಕಲಬುರಗಿಗೆ ಪೋಸ್ಟಿಂಗ್ ಆಗಿದ್ದು ನಿಮ್ಮ ಪ್ಲ್ಯಾಟ್ ಬಾಡಿಗೆ ಬೇಕಾಗಿದೆ ಎಂದು ಹೇಳಿದ್ದನಂತೆ. ಈ ವಿಷಯ ಅಬ್ದುಲ್ ಮಲಿಕ್ ತಮ್ಮ ತಂದೆ ಅಬ್ದುಲ್ ಖದೀರ್ ಅವರಿಗೆ ತಿಳಿಸಿದ್ದಾರೆ. ನಂತರ ಜು. 23 ರಂದು ಅಬ್ದುಲ್ ಖದೀರ್ ಅವರಿಗೆ ಕರೆ ಮಾಡಿದ ವಂಚಕ ತಾನು, ಜೋರಾಸಿಂಗ್. ಇಂಡಿಯನ್ ಆರ್ಮಿ ಫೈನಾನ್ಸ್ ಮ್ಯಾನೇಜರ್ ಆಗಿದ್ದೇನೆ. ನಮ್ಮ ಆಫೀಸರ್ ಸಂದೀಪ್ ರಾವತ್ ಅವರು ಕಲಬುರಗಿಗೆ ಪೋಸ್ಟಿಂಗ್ ಆಗಿದ್ದು ನಿಮ್ಮ ಪ್ಲ್ಯಾಟ್ ಅಗತ್ಯವಿದೆ ಎಂದು ಹೇಳಿದ್ದಾನೆ. ಕೆಲ ದಾಖಲಾತಿಗಳನ್ನು ಅಬ್ದುಲ್ ಖದೀರ್ ಅವರಿಗೆ ವಾಟ್ಸ್‌ಆ್ಯಪ್ ಮಾಡಿ ನಂಬಿಕೆ ಬರುವಂತೆ ಮಾತನಾಡಿದ್ದಾನೆ.
ಜುಲೈ 24ರಂದು ಬೆಳಗ್ಗೆ ಮತ್ತೆ ಕರೆ ಮಾಡಿ ಬಾಡಿಗೆ ಹಣ ಮತ್ತು ಅಡ್ವಾನ್ಸ್ ಹಣ ಹಾಕುವುದಿದೆ, ನೀವು ಒಂದು ರೂಪಾಯಿ ನಮ್ಮ ಅಕೌಂಟ್‌ಗೆ ಹಾಕಿ ಮರಳಿ ನಿಮ್ಮ ಅಕೌಂಟ್‌ಗೆ ಜಮಾ ಆಗುತ್ತವೆ ಅಂತ ಅಕೌಂಟ್ ನಂಬರ್ ಕೊಟ್ಟಿದ್ದಾರೆ. ವಂಚಕರ ಮಾತು ನಂಬಿದ ಅಬ್ದುಲ್ ಖದೀರ್ ಒಂದು ರೂಪಾಯಿ ಹಣವನ್ನು ಅವರು ನೀಡಿದ ಅಕೌಂಟ್‌ಗೆ ಹಾಕಿದ್ದಾರೆ. ತಕ್ಷಣ ವಂಚಕರು ಒಂದು ರೂಪಾಯಿ ಮರಳಿ ಜಮಾ ಕೊಟ್ಟು ನಂಬಿಕೆ ಬರುವಂತೆ ನಡೆದುಕೊಂಡಿದ್ದಾರೆ. ಬಳಿಕ ಇಲ್ಲಸಲ್ಲದ ನೆಪಗಳನ್ನೊಡ್ಡಿ ಪ್ಲ್ಯಾಟ್ ಮಾಲಿಕ ಅಬ್ದುಲ್ ಖದೀರ್ ಅವರಿಂದಲೇ ಅದೇ ದಿನ 20 ಲಕ್ಷ 22 ಸಾವಿರ 224 ರೂ. ಹಣ ಅಕೌಂಟ್‌ಗೆ ಹಾಕಿಸಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಹಣ ಹಾಕುವಂತೆ ವಂಚಕರು ಹೇಳಿದಾಗ ಅನುಮಾನಗೊಂಡ ಅಬ್ದುಲ್ ಖದೀರ್, ಹಾಕಿದ ಹಣ ವಾಪಸ್ ಕೇಳಿದ್ದಾರೆ. ಆದ್ರೆ ಆ ಬಳಿಕ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ತಾವು ಮೋಸ ಹೋಗಿರುವುದನ್ನು ಅರಿತ ಅಬ್ದುಲ್ ಖದೀರ್ ನಗರದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಬೀದಿಗಳಲ್ಲಿ ಸುತ್ತಾಡುತ್ತಿರುವ ಚಾಲಕ ರಹಿತ ಕಾರು.. ನೋಡಿ ದಂಗಾದ ಸ್ಥಳೀಯರು!