ಕಲಬುರಗಿ: ಮಳೆರಾಯನ ಆರ್ಭಟಕ್ಕೆ ಕಲಬುರಗಿ ಜಿಲ್ಲೆ ಮತ್ತೆ ಅಕ್ಷರಶಃ ನಲುಗಿ ಹೋಗಿದೆ. ಜಿಲ್ಲಾದ್ಯಂತ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಇಲ್ಲಿನ ಜನ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೆಲ ದಿನಗಳಿಂದ ಬಿಡುವು ನೀಡಿದ್ದ ವರುಣ ಕಳೆದೆರಡು ದಿನಗಳಿಂದ ಮತ್ತೆ ಅಬ್ಬರಿಸುತ್ತಿದ್ದಾನೆ. ರಾತ್ರಿಯಿಡಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಸಹ ಭಾರಿ ಪ್ರಮಾಣದ ಮಳೆ ಸುರಿದಿದ್ದು, ಸುತ್ತಮುತ್ತಲಿನ ಹಳ್ಳಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ತುಂಬಿ ಹರಿಯುತ್ತಿರುವ ಹಳ್ಳ ದಾಟಲು ವಾಹನ ಸವಾರರು ಹರಸಾಹಸ ಪಡುತ್ತಿದ್ದಾರೆ. ಇತ್ತ ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುತ್ತಿರುವ ದೃಶ್ಯ ಕಂಡು ಬಂದಿವೆ.
ನಿರಂತರ ಮಳೆಯಿಂದ ಜಮೀನುಗಳು ಕೆರೆಯಾಗಿ ಮಾರ್ಪಟ್ಟಿವೆ. ಹೊಲಗಳಲ್ಲಿ ಭಾರಿ ಪ್ರಮಾಣದ ನೀರು ಶೇಖರಣೆಯಾಗಿ ತೊಗರಿ, ಹತ್ತಿ, ಸೂರ್ಯಕಾಂತಿ ಸೇರಿದಂತೆ ಬಹುತೇಕ ಬೆಳೆಗಳು ಹಾನಿಗೊಳಗಾಗಿವೆ. ಇದರಿಂದ ಬೆಳೆ ನಾಶವಾಗಿ ಮತ್ತೆ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಕಳೆದ ಬಾರಿ ಸುರಿದ ಮಳೆಯಿಂದ ಬೆಳೆ ನಾಶವಾಗಿ ಕಷ್ಟದಲ್ಲೆ ಅನ್ನದಾತ ಮರು ಬಿತ್ತನೆ ಮಾಡಿದ್ದಾನೆ. ಆದರೆ, ಇದೀಗ ವರುಣ ಮತ್ತೆ ಮುನಿಸಿಕೊಂಡಿದ್ದರಿಂದ ಮರು ಬಿತ್ತನೆ ಬೆಳೆ ಕೂಡ ಸಂಪೂರ್ಣವಾಗಿ ನಾಶವಾಗಿದೆ.
ಇದನ್ನೂ ಓದಿ: ಡೋಣಿ ನದಿ ದಾಟಲು ಯತ್ನಿಸಿ ನೀರಲ್ಲಿ ಕೊಚ್ಚಿ ಹೋದ ವ್ಯಕ್ತಿ