ಕಲಬುರಗಿ: ರೈತರ ಪಾಲಿಗೆ ವರವಾಗ ಬೇಕಿದ್ದ ಮಳೆರಾಯ ಶಾಪವಾಗಿ ಕಾಡಲಾರಂಭಿಸಿದ್ದಾನೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮೋಡ ಕವಿದ ವಾತವರಣ ಸೃಷ್ಟಿಯಾಗಿದ್ದು, ಹಲವೆಡೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದರಿಂದ ಬೆಳೆ ಹಾನಿಯಾಗುವ ಆತಂಕದಲ್ಲಿರುವ ರೈತರು ತರಾತುರಿಯಲ್ಲಿ ರಾಶಿ ಮಾಡಲು ಮುಂದಾಗಿದ್ದಾರೆ.
ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಕಾಳು ಕಟ್ಟಿ ಕೈ ಸೇರುವ ಹಂತದಲ್ಲಿರುವ ಹೆಸರು ಬೆಳೆ ಉಳಿಸಿಕೊಳ್ಳಲು ರೈತ ಪರದಾಡುತ್ತಿದ್ದಾರೆ.
ರಾಶಿ ಮಾಡುವ ದಿನಗಳಲ್ಲಿ ಮಳೆ ಕಂಟಕವಾಗಿ ಮಾರ್ಪಟ್ಟಿದೆ. ಫಸಲು ಕೈ ಸೇರುವುದೇ ಎಂಬ ಆತಂಕದಲ್ಲಿ ಅನ್ನದಾತರಿದ್ದಾರೆ. ರಾಶಿ ಮಾಡುವ ತರಾತುರಿಯಲ್ಲಿ ಯಂತ್ರಗಳ ಮೊರೆ ಹೋಗಿದ್ದಾರೆ. ಒಣ ಬೇಸಾಯ ನಂಬಿರುವ ರೈತರು ಉತ್ತಮ ಮಳೆಯಿಂದಾಗಿ ಮುಂಗಾರು ಬಿತ್ತನೆ ಮಾಡಿದ್ದರು. ಹೆಸರು, ಶೇಂಗಾ, ಉದ್ದು ಬೆಳೆದಿದ್ದಾರೆ. ರಾಶಿ ವೇಳೆ ವರವಾಗಬೇಕಿದ್ದ ಮಳೆ ಕಷ್ಟದ ಹೊರೆಯಾಗಿ ಕಾಡುತ್ತಿದೆ.
ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರು ಆತಂಕದಲ್ಲಿ ದಿನದೂಡುತ್ತಿದ್ದಾರೆ.