ಕಲಬುರಗಿ : ಸಂಶಯಾಸ್ಪದ ರೀತಿಯಲ್ಲಿ ಮರಳು ವ್ಯಾಪಾರಿಯೊಬ್ಬರ ಶವ ಪತ್ತೆಯಾಗಿರುವ ಘಟನೆ ಕಲಬುರಗಿಯ ನಾಗನಹಳ್ಳಿ ರೈಲ್ವೆ ಮೇಲ್ಸೇತುವೆ ಬಳಿ ನಡೆದಿದೆ. ಮೃತರ ಒಂದು ಕೈ ತುಂಡಾಗಿದ್ದು, ಗುರುತು ಸಿಗದಂತೆ ಮುಖವನ್ನು ಜಜ್ಜಿ ಬರ್ಬರವಾಗಿ ಕೊಲೆಗೈದು ಬಳಿಕ ರೈಲ್ವೆ ಹಳಿಯ ಮೇಲೆ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲಬುರಗಿಯ ರಾಜಾಪುರ ಬಡಾವಣೆ ನಿವಾಸಿ ಉಮೇಶ್ ಪವಾರ (38) ಮೃತ ವ್ಯಕ್ತಿ. ಇವರ ಬಳಿ ಟಿಪ್ಪರ್, ಲಾರಿ ಇದ್ದು ಮರಳು ವ್ಯಾಪಾರ ಮಾಡಿಕೊಂಡಿದ್ದರು. ಆ.10 ರಂದು ರಾತ್ರಿ ರಾಮಮಂದಿರ ರಿಂಗ್ ರಸ್ತೆ ಬಳಿ ಉಮೇಶ್ ಹಾಗೂ ಆತನ ಸ್ನೇಹಿತರ ನಡುವೆ ಗಲಾಟೆ ನಡೆದಿತ್ತು. ಬಳಿಕ, ಶನಿವಾರ ಮನೆಯಿಂದ ಹೊರಹೋಗಿದ್ದ ಉಮೇಶ್ ಕೊನೆಯದಾಗಿ ತನ್ನ ಪತ್ನಿ ರೇಖಾಗೆ ಕರೆ ಮಾಡಿ ತಾನು ವಿಜಯಪುರದಲ್ಲಿದ್ದು, ಹಣ ಕೊಡುತ್ತಾರೆ ತೆಗೆದುಕೋ ಎಂದು ಹೇಳಿದ್ದರಂತೆ. ಆದರೆ, ಯಾರ ಬಳಿ ಹಣ ತೆಗೆದುಕೊಳ್ಳಬೇಕು ಎನ್ನುವುದನ್ನು ಹೇಳಿರಲಿಲ್ಲ. ಇದೀಗ ರೈಲ್ವೆ ಹಳಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಪತಿಯ ಸಾವಿನ ಬಗ್ಗೆ ಸಂಶಯವಿದ್ದು, ಈ ಬಗ್ಗೆ ತನಿಖೆ ನಡೆಸಿ ನಿಜಾಂಶ ಪತ್ತೆ ಹಚ್ಚಬೇಕು ಎಂದು ಮೃತರ ಪತ್ನಿ ದೂರಿನಲ್ಲಿ ಕೋರಿದ್ದಾರೆ. ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ರಾಯಚೂರು : ನಿರ್ಜನ ಪ್ರದೇಶದಲ್ಲಿ ಮಹಿಳೆಯ ಶವ ಪತ್ತೆ.. ಕೊಲೆ ಶಂಕೆ