ಕಲಬುರಗಿ: ಗಾಂಜಾ ದಂಧೆಕೋರರಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಗ್ರಾಮಾಂತರ ಸಿಪಿಐ ಶ್ರೀಮಂತ ಇಲ್ಲಾಳ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಯುನೈಟೆಡ್ ಆಸ್ಪತ್ರೆಯಿಂದ ಬೆಂಗಳೂರು ಮಣಿಪಾಲ ಆಸ್ಪತ್ರೆಗೆ ಏರ್ಲಿಫ್ಟ್ ಮುಖಾಂತರ ಸ್ಥಳಾಂತರ ಮಾಡಲಾಗಿದೆ.
ಕಲಬುರಗಿ ಪೊಲೀಸರು ಯುನೈಟೆಡ್ ಆಸ್ಪತ್ರೆಯಿಂದ ಐಸಿಯು ಆ್ಯಂಬುಲೆನ್ಸ್ನಲ್ಲಿ ವೈದ್ಯರ ತಂಡದೊಂದಿಗೆ ಇಲ್ಲಾಳ ಅವರನ್ನು ಏರ್ಪೋರ್ಟ್ಗೆ ರವಾನೆ ಮಾಡಲಾಗಿದೆ. ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಿಂದ ಹೊರಟ ಆ್ಯಂಬುಲೆನ್ಸ್ ಕೋರ್ಟ್ ಕ್ರಾಸ್, ಅನ್ನಪೂರ್ಣ ಕ್ರಾಸ್, ಸರ್ಕಾರಿ ಆಸ್ಪತ್ರೆ, ಖರ್ಗೆ ವೃತ್ತ, ಓಂ ನಗರ ಗೇಟ್, ಇಎಸ್ಐ ಆಸ್ಪತ್ರೆ ಮಾರ್ಗವಾಗಿ ವಿಮಾನ ನಿಲ್ದಾಣ ತಲುಪಿದೆ.
ಕೇರಳದ ಕೊಚ್ಚಿಯಿಂದ ವಿಶೇಷ ಏರ್ ಆ್ಯಂಬುಲೆನ್ಸ್ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, 9-40 ರ ಸುಮಾರಿಗೆ ಕಲಬುರಗಿಯಿಂದ ಟೆಕಾಫ್ ಆಗಿದೆ. ಇದು ಕೇವಲ 1 ಗಂಟೆ 30 ನಿಮಿಷದಲ್ಲಿ ಬೆಂಗಳೂರು ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ವಿಮಾನ ಬಂದಿಳಿಯಲಿದೆ.
ಸಿಪಿಐ ಇಲ್ಲಾಳ ಜೊತೆ ಪುತ್ರ ಕಿರಣ್, ಪತ್ನಿ ಹಾಗೂ ಇಬ್ಬರು ಏರ್ ಆ್ಯಂಬುಲೆನ್ಸ್ ವೈದ್ಯರು ಸಹ ಇದ್ದಾರೆ. ಏಸ್ಕಾರ್ಟ್ ನೊಂದಿಗೆ ಜಿರೋ ಟ್ರಾಫಿಕ್‌ನಲ್ಲಿ ಏರ್ಪೋರ್ಟ್ನತ್ತ ಆ್ಯಂಬುಲೆನ್ಸ್ ಹೋಗೋದನ್ನು ಮಾರ್ಗದುದ್ದಕ್ಕೂ ಸಾರ್ವಜನಿಕರು ಕುತೂಹಲದಿಂದ ನಿಂತು ವೀಕ್ಷಣೆ ಮಾಡಿದರು.
ಇದನ್ನೂ ಓದಿ: ಕಲಬುರಗಿಗೆ ಬಂದ ಏರ್ ಆ್ಯಂಬುಲೆನ್ಸ್: ಇಂದು ಸಿಪಿಐ ಶ್ರೀಮಂತ ಇಲ್ಲಾಳ ಬೆಂಗಳೂರಿಗೆ ಏರ್ಲಿಫ್ಟ್
ಪ್ರಕರಣದ ಹಿನ್ನೆಲೆ: ಸೆ.23ರಂದು ಮಂಠಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಇದು. ಕಮಲಾಪುರ ತಾಲೂಕಿನ ದಸ್ತಾಪುರ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಕಲಬುರಗಿಯ ನವೀನ ಹಾಗೂ ಬಸವಕಲ್ಯಾಣ ತಾಲೂಕು ಭೋಸಗಾದ ಸಂತೋಷ ಎಂಬಾತನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಇವರು ನೀಡಿದ ಮಾಹಿತಿ ಆಧಾರದ ಮೇಲೆ ಗಾಂಜಾ ಬೆಳೆಯ ಮೂಲಸ್ಥಾನ ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಹೊನ್ನಾಳಿ ಜಮೀನೊಂದರ ಮೇಲೆ ಕಮಲಾಪುರ ಸಿಪಿಐ ಶ್ರೀಮಂತ ಇಲ್ಲಾಳ ನೇತೃತ್ವದ 10 ಜನರ ತಂಡ ದಾಳಿ ನಡೆಸಿತ್ತು.
ಈ ವೇಳೆ ಕಟ್ಟಿಗೆ, ಕಲ್ಲು ಸಮೇತ ದಿಢೀರನೇ ಪ್ರತ್ಯಕ್ಷವಾದ ಸುಮಾರು 40 ಜನ ದುಷ್ಕರ್ಮಿಗಳ ತಂಡ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಸಿಪಿಐ ಶ್ರೀಮಂತ ಇಲ್ಲಾಳ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ಇದನ್ನೂ ಓದಿ: ಪೊಲೀಸರ ಮೇಲೆ ಗಾಂಜಾ ದಂಧೆಕೋರರ ಅಟ್ಟಹಾಸ: ಕಲಬುರಗಿ ಸರ್ಕಲ್ ಇನ್ಸ್ಪೆಕ್ಟರ್ ಸ್ಥಿತಿ ಚಿಂತಾಜನಕ