ಕಲಬುರಗಿ: ಮೋದಿ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಪಿಐಎಂ ನೇತೃತ್ವದಲ್ಲಿ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಿಪಿಎಂ ಮುಖಂಡ ಮಾರುತಿ ಮಾನ್ಪಡೆ ನೇತೃತ್ವಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು. ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದೇಶಾದ್ಯಂತ ಕೋವಿಡ್ ರುದ್ರ ತಾಂಡವವಾಡುತ್ತಿದೆ. 50 ಸಾವಿರಕ್ಕೂ ಹೆಚ್ಚು ಜನ ಈ ಸೋಂಕಿಗೆ ಬಲಿಯಾಗಿದ್ದಾರೆ. ಲಾಕ್ಡೌನ್ ಜಾರಿ ವಿಷಯದಲ್ಲಿಯೂ ಮೋದಿ ಸಂಪೂರ್ಣ ವಿಫಲವಾಗಿದ್ದಾರೆ. ಈಗಲಾದರೂ ಜನಪರ ಕೆಲಸ ಮಾಡುವಂತೆ ಆಗ್ರಹಿಸಿದರು.
ಅತಿವೃಷ್ಟಿಯಿಂದ ಹಾನಿಗೀಡಾದ ಹೆಸರು, ಉದ್ದಿಗೆ ಪ್ರತೀ ಎಕರೆಗೆ 20 ಸಾವಿರ ರೂ. ಪರಿಹಾರ ನೀಡಬೇಕು. ಹೆಸರು, ಉದ್ದು ಖರೀದಿ ಕೇಂದ್ರ ಪ್ರಾರಂಭಿಸಬೇಕು. ರೈತರಿಗೆ ಹೊಸದಾಗಿ ಕೃಷಿ ಸಾಲ ಮಂಜೂರು ಮಾಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.