ಕಲಬುರಗಿ: ಕೋವಿಡ್ ನಿಯಮ ಉಲ್ಲಂಘಿಸಿ ಜನಾಶೀರ್ವಾದ ಯಾತ್ರೆ ನಡೆಸಿದ ಕಾರಣ, ಕಾರ್ಯಕ್ರಮ ಆಯೋಜಕರು ಹಾಗೂ ಕಲ್ಯಾಣ ಮಂಟಪದ ಮಾಲೀಕರ ವಿರುದ್ಧ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (ಪ್ರಥಮ ವರ್ತಮಾನ ವರದಿ) ದಾಖಲಾಗಿದೆ.
ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆಯ ನೂತನ ಸಚಿವ ಭಗವಂತ ಖೂಬಾ ನೇತೃತ್ವದಲ್ಲಿ ಮಂಗಳವಾರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಲಾಗಿತ್ತು.
ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆ, ಸಮಾವೇಶ, ಸಮಾರಂಭ ಮತ್ತು ಕಾರ್ಯಕ್ರಮಗಳನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ ಕಲಬುರಗಿ ಜಿಲ್ಲೆ ಮಹಾರಾಷ್ಟ್ರದ ಗಡಿ ಹೊಂದಿಕೊಂಡಿದ್ದು, ರಾತ್ರಿ 9ರಿಂದ ಕರ್ಫ್ಯೂ ಕೂಡ ಜಾರಿಯಲ್ಲಿದೆ. ಆದರೂ ಸಹ ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾತ್ರಿ ನಿಯಮಗಳನ್ನು ಮೀರಿ ಯಾತ್ರೆ ನಡೆಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಕಲಬುರಗಿ ತಹಶೀಲ್ದಾರ್ ಪ್ರಕಾಶ ಕುದರಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಕಾರ್ಯಕ್ರಮ ಆಯೋಜಕರು ಮತ್ತು ಕಲ್ಯಾಣ ಮಂಟಪದ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಜನರಿಂದ ತಿರಸ್ಕೃತಗೊಂಡ ಸರ್ಕಾರದಿಂದ ಸದನಕ್ಕೆ ಅಡ್ಡಿ: ಭಗವಂತ ಖೂಬಾ