ಕಲಬುರಗಿ: ಮದುವೆಯಲ್ಲಿ ಪತ್ನಿಗೆ ಚಿನ್ನಾಭರಣ ಹಾಕಿಲ್ಲ. ಸೋಷಿಯಲ್ ಮೀಡಿಯಾ ಅಕೌಂಟ್ಸ್ ಇಲ್ಲ. ಪತ್ನಿಯ ಹೆಸರಲ್ಲಿ ಪ್ಯಾನ್ ಕಾರ್ಡ್ ಇಲ್ಲ. ತಂದೆ, ತಾಯಿ, ಪತ್ನಿ ಬ್ಯಾಂಕ್ ಅಕೌಂಟ್ ಇಲ್ಲ, ಹಣವೂ ಇಲ್ಲ... ಹೀಗೆ ಕೋಟ್ಯಾಧೀಶನಾದರೂ ಆಸ್ತಿ, ಸಂಪತ್ತು ಇಲ್ಲ ಎಂದು ತೋರಿಸಿದ ಕಾರಣಕ್ಕೆ ಕಲಬುರಗಿ ಮಹಾನಗರ ಪಾಲಿಕೆ ಸದಸ್ಯ ಡಾ. ಶಂಭುಲಿಂಗ ಬಳಬಟ್ಟಿ ತಮ್ಮ ಸ್ಥಾನವನ್ನೇ ಕಳೆದುಕೊಂಡಿದ್ದಾರೆ.
ಹೌದು, ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 36ರ ಸ್ವತಂತ್ರ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದ ಡಾ.ಶಂಭುಲಿಂಗ ಬಳಬಟ್ಟಿ ನಾಮಪತ್ರ ಸಲ್ಲಿಸುವಾಗ ನೀಡಿದ ಸುಳ್ಳು ಮಾಹಿತಿಯೇ ಅವರಿಗೆ ಮುಳ್ಳಾಗಿದೆ. ಆಸ್ತಿ ಇಲ್ಲವೆಂದು ತೋರಿಸಿಕೊಂಡವರು ಸಾಲ ಮಾತ್ರ ಚಾಚು ತಪ್ಪದೆ ತೋರಿಸಿದ್ದಾರೆ ಎಂದು ಶಂಭುಲಿಂಗ ಬಳಬಟ್ಟಿ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದ ನ್ಯಾಯವಾದಿ ಆರತಿ ತಿವಾರಿ ತಿಳಿಸಿದ್ದಾರೆ.
ಶಂಭುಲಿಂಗ ಬಳಬಟ್ಟಿ ಅವರ ಆಯ್ಕೆಯನ್ನು ಜಿಲ್ಲಾ ನ್ಯಾಯಾಲಯ ಅಸಿಂಧುಗೊಳಿಸಿ ಆದೇಶ ಹೊರಡಿಸಿದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಚುನಾವಣಾ ಆಯೋಗದ ಮುಂದೆ ಹಲವು ಮಾಹಿತಿಗಳನ್ನು ಮರೆಮಾಚಿ ಶಂಭುಲಿಂಗ ಬಳಬಟ್ಟಿ ಸುಳ್ಳು ಅಫಿಡವಿಟ್ (ಪ್ರಮಾಣಪತ್ರ) ಸಲ್ಲಿಸಿದ್ದರು ಎಂದರು.
ಇದನ್ನೂ ಓದಿ: ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿಗೆ ಹಿನ್ನಡೆ: ಕಾರ್ಪೊರೇಟರ್ ಪ್ರಿಯಾಂಕಾ ಸದಸ್ಯತ್ವ ಅಸಿಂಧು
ಈ ಬಗ್ಗೆ ನಾಮಪತ್ರ ಸಲ್ಲಿಸುವಾಗಲೇ ಚುನಾವಣೆ ಅಧಿಕಾರಿಗಳ ಮುಂದೆ ನಾನು ಅಕ್ಷೇಪ ವ್ಯಕ್ತಪಡಿಸಿದ್ದೆ. ಆದರೆ, ಆಗ ಪರಿಗಣಿಸಿರಲಿಲ್ಲ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಿದ್ದೆ. ನಾಮಪತ್ರ ಸಲ್ಲಿಕೆ ವೇಳೆ ಕಡ್ಡಾಯವಾಗಿ ಪ್ರಮಾಣಪತ್ರ, ಘೋಷಣಾ ಪತ್ರ ಸಲ್ಲಿಸುವ ಮೂಲಕ ತಮ್ಮ ಜೀವನದ ವಾಸ್ತವತೆ ಬಿಚ್ಚಿಡಬೇಕು. ಆದರೆ, ಬಳಬಟ್ಟಿ ಸಂಪೂರ್ಣ ಸುಳ್ಳು ಮಾಹಿತಿಯೊಂದಿಗೆ ಪ್ರಮಾಣ ಪತ್ರ, ಘೋಷಣಾ ಪತ್ರ ಸಲ್ಲಿಸಿದ್ದರು ಎಂದು ಹೇಳಿದರು.
ಏನೆಲ್ಲಾ ಸುಳ್ಳು, ತಪ್ಪು ಮಾಹಿತಿ?: ಕೇಂದ್ರಿಯ ವಿಶ್ವ ವಿದ್ಯಾಲಯದಿಂದ ಪಿಎಚ್‌ಡಿ ಪದವಿ ಹೊಂದಿದ ಶಂಭುಲಿಂಗ ಬಳಬಟ್ಟಿ ತಮ್ಮ ವಯಸ್ಸು 38. ಇಮೇಲ್ ಐಡಿ ಇಲ್ಲ, ಸೋಷಿಯಲ್ ಮಿಡಿಯಾ ಅಕೌಂಟ್ಸ್ ಇಲ್ಲ. ವಿದ್ಯಾರ್ಹತೆ ಇಲ್ಲ. ಪತ್ನಿಯ ಪ್ಯಾನ್ ಕಾರ್ಡ್ ಇಲ್ಲ. ತಂದೆ, ತಾಯಿ, ಪತ್ನಿ ಸೇರಿ ಅವಲಂಬಿತರ ಬ್ಯಾಂಕ್ ಅಕೌಂಟ್ ಇಲ್ಲ. ತಮ್ಮ ಬಳಿ ಹಣವಿಲ್ಲ ಹಾಗೂ ಚಿನ್ನಾಭರಣವಿಲ್ಲ ಎಂದು ಪ್ರಮಾಣ ಪತ್ರ, ಘೋಷಣಾ ಪತ್ರಗಳಲ್ಲಿ ನಮೂದಿಸಿದ್ದರು ಎಂದು ನ್ಯಾಯವಾದಿ ತಿವಾರಿ ವಿವರಿಸಿದರು.
ಕೋರ್ಟ್‌ನಲ್ಲಿಯೂ ಮಾಹಿತಿ ಸುಳ್ಳು: ಶಂಭುಲಿಂಗ್ ಅವರ ಮದುವೆ ಇತ್ತೀಚಿಗಷ್ಟೆ ಆಗಿತ್ತು. ಮದುವೆ ವೇಳೆ ಪತ್ನಿಗೆ ಎಷ್ಟು ಚಿನ್ನಾಭರಣ ಹಾಕಿದ್ದೀರಿ ಅಂತ ನ್ಯಾಯಾಲಯದ ವಿಚಾರಣೆ ವೇಳೆ ಕೇಳಿದಾಗ ಅಲ್ಲಿಯೂ ಸುಳ್ಳು ಹೇಳಿಕೆ ನೀಡಿದ್ದರು. ಮದುವೆಯಲ್ಲಿ ಪತ್ನಿಗೆ ಚಿನ್ನಾಭರಣ ಹಾಕಿಲ್ಲವೆಂದು ಹೇಳಿದ್ದರು. ಅಲ್ಲದೇ, 56 ಎಕರೆಗೂ ಅಧಿಕ ಜಮೀನಿದ್ದರೂ, ಪ್ರಮಾಣಪತ್ರದಲ್ಲಿ ಇಲ್ಲ ಎಂಬ ಮಾಹಿತಿ ನೀಡಿದ್ದರು ಎಂದು ನ್ಯಾಯವಾದಿ ಆರತಿ ತಿವಾರಿ ಹೇಳಿದರು.
ಜೊತೆಗೆ ತಂದೆ, ತಾಯಿ ಹೆಸರಲ್ಲಿ ಹಾಗೂ ತಮ್ಮ ಹೆಸರಿನಲ್ಲಿ ಜಮೀನು, ಮನೆ, ನಿವೇಶನ ಇದ್ದರೂ ಎಲ್ಲ ಕಾಲಂಗಳಲ್ಲಿ ಇಲ್ಲ ಎಂದು ಬರೆದ್ದರು. ಘೋಷಣಾ ಪತ್ರದಲ್ಲಿ ಒಟ್ಟು ಆಸ್ತಿಯ ಮೊತ್ತ ತೋರಿಸಬೇಕು. ಆದರೆ, ಆಸ್ತಿ ಇಲ್ಲ ಎಂದು ಬರೆದ ಶಂಭುಲಿಂಗ, ಸಾಲ ಮಾತ್ರ ತೋರಿಸಲು ಮರೆತಿರಲಿಲ್ಲ. ಹಲವು ಬ್ಯಾಂಕ್ಗಳಲ್ಲಿ 5ರಿಂದ 6 ಲಕ್ಷ ಸಾಲ ಇರುವುದಾಗಿ ನಮೂದಿಸಿದ್ದರು ಎಂದರು.
ನ್ಯಾಯಾಲಯದ ಆದೇಶ ಏನು: ಹಲವು ಸುಳ್ಳು ಮಾಹಿತಿ ನೀಡಿ ಚುನಾವಣೆಗೆ ಸ್ಪರ್ಧಿಸಿ ವಿಜೇತರಾಗಿದ್ದಾರೆ ಎಂಬ ತಾರ್ಕಿಕ ಅಂತ್ಯಕ್ಕೆ ಬಂದ ನ್ಯಾಯಾಲಯವು ಶಂಭುಲಿಂಗ ಬಳಬಟ್ಟಿಯ ಮಹಾನಗರ ಪಾಲಿಕೆ ಸದಸ್ಯ ಸ್ಥಾನದ ಆಯ್ಕೆಯನ್ನು ಅಸಿಂಧುಗೊಳಿಸಿದೆ. ಆರು ವರ್ಷಗಳ ಕಾಲ ಯಾವುದೆ ಚುನಾವಣೆಗಳಿಗೆ ಸ್ಪರ್ಧೆ ಮಾಡುವಂತಿಲ್ಲ ಹಾಗೂ ಮತ ಕೂಡಾ ಹಾಕುವಂತಿಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿದೆ ಎಂದು ನ್ಯಾಯವಾದಿ ಆರತಿ ತಿವಾರಿ ಮಾಹಿತಿ ನೀಡಿದರು.
ಇದನ್ನೂ ಓದಿ: ಕಲಬುರಗಿ ಪಾಲಿಕೆ ಸದಸ್ಯನ ಆಯ್ಕೆ ಅಸಿಂಧು: ಜಿಲ್ಲಾ ನ್ಯಾಯಾಲಯ ಆದೇಶ