ಕಲಬುರಗಿ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ತಾಯಿ ಹಾಗೂ ನಾಲ್ಕು ವರ್ಷದ ಮಗು ಸೋಂಕಿನಿಂದ ಪಾರಾಗಿದ್ದಾರೆ. ತಾಯಿ-ಮಗು ಸೇರಿ ಮತ್ತೆ ಮೂವರು ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ. ಶರತ್ ತಿಳಿಸಿದ್ದಾರೆ.
ಕಲಬುರಗಿ ನಗರದ ಮೋಮಿನಪುರ ಪ್ರದೇಶದ 26 ವರ್ಷದ ಮಹಿಳೆ (ರೋಗಿ ಸಂಖ್ಯೆ-425) ಹಾಗೂ ಆಕೆಯ ನಾಲ್ಕು ತಿಂಗಳ ಮಗು (ರೋಗಿ ಸಂಖ್ಯೆ-424) ಹಾಗೂ ಮಾಣಿಕೇಶ್ವರಿ ನಗರದ 46 ವರ್ಷದ ಮಹಿಳೆ (ರೋಗಿ ಸಂಖ್ಯೆ-421) ಗುಣಮುಖರಾಗಿದ್ದಾರೆ. ಈ ಮೂವರೂ ಏ. 22ರಂದು ಕೊರೊನಾ ಸೋಂಕು ದೃಢವಾಗಿದ್ದರಿಂದ ಚಿಕಿತ್ಸೆಗೆ ದಾಖಲಾಗಿದ್ದರು.
ಇಂದು ನೆಗೆಟಿವ್ ವರದಿ ಬಂದ ಹಿನ್ನೆಲೆ ಮೂವರನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈ ಮೂವರು ಸೇರಿದಂತೆ ಇಂದು ಒಟ್ಟು 5 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಬುಧವಾರ ಬೆಳಗ್ಗೆ ನಗರದ ಮಹೆಬೂಬ್ ನಗರದ 50 ವರ್ಷದ ಪುರುಷ (ರೋಗಿ ಸಂಖ್ಯೆ-394) ಮತ್ತು ಮೋಮಿನಪುರ ಪ್ರದೇಶದ 19 ವರ್ಷದ ಯುವಕ (ರೋಗಿ ಸಂಖ್ಯೆ-395) ಇವರು ಸಹ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಇದರಿಂದ ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ ಪತ್ತೆಯಾದ 64 ಕೊರೊನಾ ಸೋಂಕಿತರಲ್ಲಿ ಒಟ್ಟು 27 ರೋಗಿಗಳು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 6 ಜನ ನಿಧನ ಹೊಂದಿದ್ದು, 31 ಜನ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾರಣಾಂತಿಕ ಕೊರೊನಾ ಜಿಲ್ಲೆಯಲ್ಲಿ ಅಟ್ಟಹಾಸ ಮುಂದುವರಿಸಿದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ವಿಸ್ತರಿಸಿ ಜಿಲ್ಲಾಧಿಕಾರಿ ಶರತ್ ಬಿ. ಆದೇಶಿಸಿದ್ದಾರೆ.