ಕಲಬುರಗಿ: ಗಣೇಶ ಚತುರ್ಥಿ ಹಬ್ಬಕ್ಕೆ ಭರ್ಜರಿ ತಯಾರಿ ನಡೆದಿದೆ. ಆದರೆ, ಕೊರೊನಾ ಹಾವಳಿಯಿಂದ ಗಣೇಶ ಮೂರ್ತಿ ತಯಾರಿ ಮಾಡುವ ಕುಟುಂಬಗಳು ಆತಂಕಕ್ಕೆ ಸಿಲುಕಿವೆ. ಕೊರೊನಾ ನಿಯಂತ್ರಣಕ್ಕಾಗಿ ಸಾರ್ವಜನಿಕ ಗಣೇಶ ಉತ್ಸವ ಆಚರಣೆಗೆ ಸರ್ಕಾರ ಬ್ರೇಕ್ ಹಾಕಿದ್ದು, ಹಾಕಿದ ಬಂಡವಾಳ ವಾಪಸ್ ಬರುತ್ತೋ ಇಲ್ವೋ ಅನ್ನೋ ಆತಂಕದಲ್ಲಿ ಕಲಾವಿದರಿದ್ದಾರೆ.
ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚತುರ್ಥಿ ಹಬ್ಬಕ್ಕಾಗಿ ಕಲಬುರಗಿಯಲ್ಲಿ ಗಣೇಶ್ ಮೂರ್ತಿ ತಯಾರಿಕೆಯಲ್ಲಿ ಕಲಾವಿದರು ಬ್ಯೂಸಿ ಆಗಿದ್ದಾರೆ. ಆದ್ರೆ ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಜಿಲ್ಲಾ ಪೊಲೀಸ್ ಸಾರ್ವಜನಿಕ ಗಣೇಶ ಉತ್ಸವಕ್ಕೆ ಬ್ರೇಕ್ ಹಾಕಿದೆ. ಜನರು ಗುಂಪು ಸೇರುವ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ್ ಮೂರ್ತಿ ಪ್ರತಿಷ್ಠಾಪನೆಗೆ ಕಡಿವಾಣ ಹಾಕಲಾಗಿದೆ. ಹೀಗಾಗಿ ಗಣೇಶನ ಮೂರ್ತಿಗಳನ್ನ ತಯಾರು ಮಾಡುತ್ತಿರುವ ಕಲಾವಿದರು ಆರ್ಡರ್ ಇಲ್ಲದೇ ಸಂಕಷ್ಟಕ್ಕೆ ಸೀಲುಕಿದ್ದಾರೆ. ಸಾಲ ಮಾಡಿ ಹಾಕಿರುವ ಲಕ್ಷಾಂತರ ರೂಪಾಯಿ ಬಂಡಳವಾದರೂ ವಾಪಸ್ ಬರುತ್ತೋ ಇಲ್ಲವೋ ಅನ್ನೋ ಆತಂಕದಲ್ಲಿದ್ದಾರೆ.
ನಗರದ ಬಿದ್ದಾಪುರ ಕಾಲೋನಿಯಲ್ಲಿ ಗಣೇಶ ಮೂರ್ತಿ ತಯಾರಿಸುವ ರಾಜಸ್ಥಾನ ಮೂಲದ ಕುಟುಂಬಗಳು ವಾಸ ಇವೆ. ಕಳೆದ ಹತ್ತು ವರ್ಷಗಳಿಂದ ಗಣೇಶ್ ಮೂರ್ತಿ, ಇತರ ಡೆಕೊರೇಟಿವ್ ಮೂರ್ತಿಗಳನ್ನ ತಯಾರಿಸಿ ಜೀವನ ಸಾಗಿಸುತ್ತಿವೆ. ಪ್ರಮುಖವಾಗಿ ಗಣೇಶ್ ಹಬ್ಬವನ್ನೇ ನೆಚ್ಚಿಕೊಂಡು ವಿಭಿನ್ನವಾದ ಗಣೇಶನ ಮೂರ್ತಿಗಳನ್ನ ತಯಾರು ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಸಾಲ - ಸೂಲ ಮಾಡಿ ಲಕ್ಷಾಂತರ ರೂ. ಬಂಡವಾಳ ಹಾಕಿ ಹಬ್ಬಕ್ಕಾಗಿ ಸಾವಿರಾರು ಗಣೇಶನ ಮೂರ್ತಿಗಳನ್ನ ರೆಡಿ ಮಾಡಿಟ್ಟುಕೊಂಡಿವೆ. ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ್ ಮೂರ್ತಿ ಪ್ರತಿಷ್ಠಾಪನೆಗಾಗಿ ಹೆಚ್ಚಿನ ಬೇಡಿಕೆ ಇರುವ ಕಾರಣ ಪ್ರತಿ ವರ್ಷದಂತೆ ಈ ಬಾರಿಯೂ ಬೃಹತ್ ಗಣೇಶ್ ಮೂರ್ತಿಗಳನ್ನು ರೆಡಿ ಮಾಡಿದ್ದಾರೆ. ಆದರೀಗ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ್ ಮೂರ್ತಿ ಪ್ರತಿಷ್ಠಾಪನೆಗೆ ಬ್ರೇಕ್ ಬಿದ್ದಿದ್ದರಿಂದ ಬಡ ಕಲಾವಿದರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದು, ಪುಟ್ಟ ಪುಟ್ಟ ಮಕ್ಕಳನ್ನು ಇಟ್ಟುಕೊಂಡು ಮುಂದಿನ ಜೀವನ ನಡೆಸುವುದಾದರೂ ಹೇಗೆ ಅನ್ನೋ ಚಿಂತೆಯಲ್ಲಿ ಮುಳಗಿದ್ದಾರೆ.
ಒಟ್ಟಿನಲ್ಲಿ ವಿಘ್ನ ವಿನಾಶಕನಿಗೆ ಈ ಬಾರಿ ಮಹಾಮಾರಿ ಕೊರೊನಾ ವಿಘ್ನವಾಗಿ ಕಾಡುತ್ತಿದೆ. ಗಣೇಶನನ್ನೆ ನಂಬಿಕೊಂಡು ಹತ್ತಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿರುವ ಕುಟುಂಬಗಳು, ಈ ಬಾರಿಯೂ ಕೂಡ ಲಂಬೋದರನೆ ದಾರಿ ತೊರುತ್ತಾನೆ ಅನ್ನೋ ನಂಬಿಕೆಯಲ್ಲಿದ್ದಾರೆ.