ಕಲಬುರಗಿ: ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ನೌಕರರು ಮುಷ್ಕರ ಮುಂದುವರಿಸಿದ್ದು, ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವುದನ್ನು ಖಂಡಿಸಿದರು.
ಕಳೆದ ಹಲವು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಸೇವಾ ಭದ್ರತೆಯನ್ನು ಇದೂವರೆಗೂ ಒದಗಿಸಿಲ್ಲ, ಸಮಾನ ಕೆಲಸಕ್ಕೆ ಸಮಾನ ವೇತನವನ್ನೂ ಸಹ ನೀಡುತ್ತಿಲ್ಲ. ಜೀವದ ಹಂಗು ತೊರೆದು ಕೋವಿಡ್ ಕರ್ತವ್ಯದಲ್ಲಿದ್ದೇವೆ, ಈಗಲಾದರೂ ಸೇವಾ ಭದ್ರತೆ ಕಲ್ಪಿಸಬೇಕು. 6ನೇ ವೇತನ ಆಯೋಗದನ್ವಯ ಮೂಲ ವೇತನ ನೀಡಬೇಕು. ಗುತ್ತಿಗೆ, ಹೊರಗುತ್ತಿಗೆ ನೌಕರರಿಗೂ ಕೋವಿಡ್ ವಿಮಾ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಬೇಡಿಕೆ ಈಡೇರುವವರೆಗೂ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲವೆಂದು ಹೋರಾಟಗಾರರು ಎಚ್ಚರಿಕೆ ರವಾನಿಸಿದ್ದಾರೆ. ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಮುಷ್ಕರಿಂದಾಗಿ ಕಳೆದೆರಡು ದಿನಗಳಿಂದ ವೈದ್ಯಕೀಯ ವರದಿಗಳನ್ನೂ ನೀಡಲಾಗುತ್ತಿಲ್ಲ. ಕೋವಿಡ್ಗೆ ಸಂಬಂಧಿಸಿದಂತೆ ಕೇವಲ ಪಾಸಿಟಿವ್ ವರದಿ ಮಾತ್ರ ಬರುತ್ತಿದ್ದು, ಕೋವಿಡ್ನಿಂದ ಸಾವನ್ನಪ್ಪಿದವರು ಹಾಗೂ ಸೋಂಕಿನಿಂದ ಗುಣಮುಖರಾದವರ ವರದಿ ದೊರೆಯುತ್ತಿಲ್ಲ.