ಕಲಬುರಗಿ : ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ ಅವರ ಪಿಎಗೆ ಥಳಿಸಿದ ಘಟನೆಯನ್ನು ಖಂಡಿಸಿ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಶಾಸಕಿ ಖನೀಜ್ ಫಾತಿಮಾ ನೇತೃತ್ವದಲ್ಲಿ ನಗರದ ಮುಸ್ಲಿಂ ಚೌಕ್‌ನಿಂದ ಐಜಿಪಿ ಕಚೇರಿವರೆಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ವಿನಾಕಾರಣ ಶಾಸಕರ ಆಪ್ತ ಸಹಾಯಕ ಆದಿಲ್ ಸುಲೇಮಾನ್ ಅವರ ಮೇಲೆ ಪೊಲೀಸ್ ಆಯುಕ್ತರು ಥಳಿಸಿದ್ದಾರೆ. ಆಯುಕ್ತರು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೆಪ್ಟೆಂಬರ್ 1ರ ತಡರಾತ್ರಿ 2 ಗಂಟೆಗೆ ಶಾಸಕರನ್ನ ಮನೆಗೆ ಡ್ರಾಪ್ ಮಾಡಿ ತಮ್ಮ ಮನೆಗೆ ತೆರಳುತ್ತಿದ್ದಾಗ ಗಸ್ತಿನಲ್ಲಿದ್ದ ನಗರ ಪೊಲೀಸ್ ಆಯುಕ್ತ ವೈ ಎಸ್ ರವಿಕುಮಾರ್ ಹಲ್ಲೆ ಮಾಡಿದ್ದರು ಎಂದು ನೊಂದ ಆದೀಲ್ ಸುಲೇಮಾನ್ ಆರೋಪಿಸಿದ್ದಾರೆ.
ಕೂಡಲೇ ಪೊಲೀಸ್ ಆಯುಕ್ತ ವೈ ಎಸ್ ರವಿಕುಮಾರ್ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಈಶಾನ್ಯ ವಲಯ ಐಜಿಪಿ ಮನೀಶ್ ಖರ್ಬೆಕರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ್, ಡಿಸಿಸಿ ಅಧ್ಯಕ್ಷ ಜಗದೇವ್ ಗುತ್ತೇದಾರ್ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.
ಘಟನೆ ವಿವರ
ಸೆಪ್ಟೆಂಬರ್ 1ರಂದು ತಡರಾತ್ರಿ ಚುನಾವಣೆ ನೀತಿ ಸಂಹಿತೆ ಜಾರಿ ಇದ್ದರೂ ಸಹ ಶಾಸಕಿ ಖನೀಜ್ ಫಾತೀಮಾ ಅವರ ಪಿಎ ಆದಿಲ್ ಸುಲೇಮಾನ್ ರಾತ್ರಿ ವೇಳೆ ಬೆಂಬಲಿಗರೊಂದಿಗೆ ಸುತ್ತಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ವೇಳೆ ನಗರದ ಸಾಥ್ ಗುಂಬಜ್ ಬಳಿ ಪೊಲೀಸ್ ಕಮಿಷನರ್ ಅವರು ಆದಿಲ್ ಸುಲೇಮಾನ್ ಅವರನ್ನು ತಡೆದು ಥಳಿಸಿದ್ರು ಎಂದು ಶಾಸಕಿ ಖನೀಜ್ ಫಾತಿಮಾ ಆರೋಪಿಸಿದ್ದಾರೆ.
ಓದಿ: ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಿಂದ ಹಿಂದೆ ಸರಿದ್ರಾ ಮಾಜಿ ಸಚಿವ ವಿನಯ ಕುಲಕರ್ಣಿ!?