ಕಲಬುರಗಿ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಇಡಿ ನೋಟಿಸ್ ನೀಡಿರುವುದರಲ್ಲಿ ಬಿಜೆಪಿ ಪಾತ್ರವಿಲ್ಲ. ಆದರೆ, ಕಾಂಗ್ರೆಸ್ ನಾಯಕರು ಕೇವಲ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು ಬಿಜೆಪಿ ಇಡಿಯನ್ನು ದುರುಪಯೋಗಪಡಿಸಿಕೊಂಡು, ಕುತಂತ್ರದಿಂದ ಕಾಂಗ್ರೆಸ್ ನಾಯಕರಿಗೆ ನೋಟಿಸ್ ನೀಡಿಸುತ್ತಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಇಡಿ, ಸಿಐಡಿ ಹಾಗೂ ಇನ್ನಿತರ ತನಿಖಾ ಸಂಸ್ಥೆಗಳು ಸಾಂವಿಧಾನಿಕ, ಸ್ವತಂತ್ರ ಸಂಸ್ಥೆಯಾಗಿದೆ. ಅವುಗಳು ತಮ್ಮ ಕೆಲಸ ಮಾಡುತ್ತವೆ. ಈ ಮೊದಲು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಹಲವರಿಗೆ ಇಡಿ ನೋಟಿಸ್ ನೀಡಲಾಗಿತ್ತು. ಹಾಗಂತ ಅದರಲ್ಲಿ ಕಾಂಗ್ರೆಸ್ ಪಾತ್ರವಿದೆ ಎಂದು ಹೇಳಕ್ಕಾಗುತ್ತಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಆರೋಪದಲ್ಲಿ ಯಾವುದೇ ಹುರಳಿಲ್ಲ ಎಂದು ಹೇಳಿದರು.