ಕಲಬುರಗಿ: ಅವಿರೋಧವಾಗಿ ಆಯ್ಕೆಯಾಗುವ ಗ್ರಾಮ ಪಂಚಾಯಿತಿಗೆ 1 ಕೋಟಿ ರೂ . ವಿಶೇಷ ಅನುದಾನವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಬಿಡುಗಡೆ ಮಾಡಲಾಗುವುದು ಎಂದು ಹೇಳುವ ಮೂಲಕ ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಚುನಾವಣೆ ನೀತಿ ಸಂಹಿತೆ ಉಲ್ಲಂಘಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ಮುಖಂಡರು, ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಈ ಕುರಿತು ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದ ಪತ್ರವನ್ನು ಬಿಡುಗಡೆ ಮಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ದತ್ತಾತ್ರೇಯ ಪಾಟೀಲ್ ತಮಗಿರುವ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಮೂಲಕ ಅವಿರೋಧವಾಗಿ ಆಯ್ಕೆಯಾಗುವ ಗ್ರಾ. ಪಂ. ತಲಾ ರೂ. ಒಂದು ಕೋಟಿ ವಿಶೇಷ ಅನುದಾನ ನೀಡುವುದಾಗಿ ಘೋಷಿಸಿದ್ದು, ಚುನಾವಣೆ ನೀತಿಸಂಹಿತೆ ಉಲ್ಲಂಘನೆಯಾಗುವುದರ ಜೊತೆಗೆ ಭಾರತೀಯ ದಂಡಸಂಹಿತೆ ಕಲಂ 171 ರ ಪ್ರಕಾರ ಅಪರಾಧವಾಗಿದ್ದು ಈ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗುತ್ತೇದಾರ್ ಆಗ್ರಹಿಸಿದ್ದಾರೆ.
2013 ರಲ್ಲಿ ಸ್ಥಾಪಿಸಲಾದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಬಿಡುಗಡೆಯಾಗುವ ಅನುದಾನ ಮಂಡಳಿಯ ಸದಸ್ಯರೊಂದಿಗೆ ಚರ್ಚಿಸಿ, ಅಧ್ಯಕ್ಷರು ಕೇವಲ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಆದರೆ, ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾದ ನಂತರ ಚುನಾವಣೆ ಆಯೋಗದ ನೀತಿ ಸಂಹಿತೆಗೆ ವಿರುದ್ಧ ದತ್ತಾತ್ರೇಯ ಪಾಟೀಲ್ ರೇವೂರು ಅವಿರೋಧವಾಗಿ ಆಯ್ಕೆಯಾಗುವ ಪಂಚಾಯಿತಿಗಳಿಗೆ ತಲಾ ರೂ 1 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 1141 ಗ್ರಾ.ಪಂ. ಚುನಾವಣೆ ನಡೆಯುತ್ತಿದ್ದು, ರೇವೂರ್ ಅವರು ಮತದಾರರಿಗೆ ಆಮಿಷವೊಡ್ಡುವ ದುರುದ್ದೇಶದಿಂದ 1 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ರಾಜ್ಯ ಬಿಜೆಪಿ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಹೋಗದೆ, ಕೇವಲ ಮತದಾರರರಿಗೆ ಹಣದ ಆಮಿಷ ತೋರಿಸುವ ಉದ್ದೇಶ ಹೊಂದಿದೆ ಎಂದು ಅವರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೆಯ ಪಾಟೀಲ್ ರೇವೂರ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗುತ್ತೇದಾರ್ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ಓದಿ :ಗ್ರಾ.ಪಂ.ಚುನಾವಣೆ 2ನೇ ಹಂತದ ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಪ್ರಿಯಾಂಕ್ ಖರ್ಗೆ, ಇದೊಂದು ಸಂವಿಧಾನ ವಿರೋಧಿ ಕ್ರಮ. ಅಧ್ಯಕ್ಷರ ಹೇಳಿಕೆ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಯಬೇಕೆಂಬ ಚುನಾವಣಾ ಆಯೋಗದ ಸಂಹಿತೆಗೆ ಧಕ್ಕೆಯಾಗುವ ಪ್ರಕ್ರಿಯೆಯಾಗಿದೆ. ಇದು ಅಭ್ಯರ್ಥಿಗಳಿಗೆ ಹಾಗೂ ಮತದಾರರಿಗೆ ನೇರವಾಗಿ ಆಮಿಷ ತೋರಿಸಿದಂತೆ. ಇದು ಎಷ್ಟರಮಟ್ಟಿಗೆ ಸರಿ.? ಎಂದು ಪ್ರಶ್ನಿಸಿದ್ದಾರೆ.
ಅವಿರೋಧವಾಗಿ ಆಯ್ಕೆಯಾಗುವ ಪಂಚಾಯಿತಿಗೆ ಅನುದಾನ ನೀಡುವುದಾಗಿ ಘೋಷಿಸುವ ಮೂಲಕ ಕೆಕೆಆರ್ ಡಿಬಿ ಅಧ್ಯಕ್ಷರು ತಮ್ಮ ಸ್ಥಾನವನ್ನು ದುರಪಯೋಗ ಪಡಿಸಿಕೊಂಡಿದ್ದಾರೆ. ಈ ಕೂಡಲೇ ಅವರನ್ನು ವಜಾಗೊಳಿಸಬೇಕು ಎಂದು ಮಾಜಿ ಎಂ ಎಲ್ ಸಿ ಅಲ್ಲಮಪ್ರಭು ಪಾಟೀಲ್ ಆಗ್ರಹಿಸಿದ್ದಾರೆ.