ಕಲಬುರಗಿ: ಜಿಲ್ಲೆಯ ರಾಜಕಾರಣದಲ್ಲಿ ಸಾಷ್ಟಾಂಗ ನಮಸ್ಕಾರ ಸಂಸ್ಕೃತಿ ಮುಂದುವರೆದಿದೆ. ಚಿಂಚೋಳಿಯಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಅಭ್ಯರ್ಥಿ ಸುಭಾಷ್ ರಾಠೋಡ್ ಸಾಷ್ಟಾಂಗ ನಮಸ್ಕಾರ ಹಾಕುವ ಮೂಲಕ ಮತಯಾಚಣೆ ಮಾಡಿದರು.
ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 24 ವರ್ಷಗಳಿಂದ ಚಿಂಚೋಳಿ ಕ್ಷೇತ್ರದಲ್ಲಿ ನಾನು ಸೇವೆ ಸಲ್ಲಿಸುತ್ತಿದ್ದೇನೆ. ಅದನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡಿದೆ. ಹಾಗಾಗಿ ನನ್ನನ್ನು ಗೆಲ್ಲಿಸಿ ಅಭಿವೃದ್ಧಿಗೆ ಅವಕಾಶ ಮಾಡಿಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು. ವೇದಿಕೆ ಮೇಲೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಅಜಯ್ಸಿಂಗ್, ಎಂ.ವೈ. ಪಾಟೀಲ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಮುಂದುವರಿದ ಸಾಷ್ಟಾಂಗ ನಮಸ್ಕಾರ:
ಇನ್ನು ಸಾಷ್ಟಾಂಗ ನಮಸ್ಕಾರ ಸಾಂಸ್ಕೃತಿ ಕಳೆದ ವಿಧಾನಸಭಾ ಚುನಾವಣೆಯಿಂದ ಹಾಗೇ ಮುಂದುವರೆದುಕೊಂಡು ಬರುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಸಾಷ್ಟಾಂಗ ನಮಸ್ಕಾರ ಮಾಡುವ ಮೂಲಕ ಮತದಾರ ಗಮನ ಸೇಳೆದಿದ್ದರು. ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಬಹಿರಂಗ ಸಮಾವೇಶದಲ್ಲಿ ವೇದಿಕೆ ಮೇಲೆ ದೀರ್ಘ ದಂಡ ನಮಸ್ಕಾರ ಹಾಕಿ ಮತಯಾಚಣೆ ಮಾಡಿದ್ದರು.