ಕಲಬುರಗಿ : ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದ್ದು, ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ.
ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. 15 ದಿನಗಳ ಅಂತರದಲ್ಲಿ 10 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಸೋಮವಾರದಿಂದ ಗ್ರಾಮವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ.
ಗ್ರಾಮದಲ್ಲಿ ವೈದ್ಯರು ಬೀಡು ಬಿಟ್ಟಿದ್ದಾರೆ. ಕಳೆದ ವರ್ಷದ ಲಾಕ್‌ಡೌನ್ ಸಂದರ್ಭದಲ್ಲಿ ಪೊಲೀಸರು ಲಾಠಿ ರುಚಿ ತೋರಿಸಿದ್ದರೂ ಮನೆಗೆ ಹೋಗ್ತಿರಲಿಲ್ಲ. ಆದರೆ ಈಗ ಸೋಂಕಿಗೆ ಹೆದರಿ ಸ್ವಯಂ ಪ್ರೇರಿತರಾಗಿ ಮನೆಯಿಂದ ಹೊರಬರುತ್ತಿಲ್ಲ. ಹಾಗಾಗಿ ಗ್ರಾಮ ಸಂಪುರ್ಣ ಬಿಕೋ ಎನ್ನುತ್ತಿದೆ.
ಓದಿ : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಾಗುತ್ತಿದೆ, ಜನರು ಜಾಗೃತರಾಗಿರಿ : ಡಿಸಿ ಸೂಚನೆ
ಸುತ್ತಮುತ್ತಲ ಗ್ರಾಮಸ್ಥರು ಬಂದರವಾಡ ಗ್ರಾಮಸ್ಥರನ್ನು ತಮ್ಮ ಗ್ರಾಮಕ್ಕೆ ಸೇರಿಸುತ್ತಿಲ್ಲ. ಬಂದರವಾಡ ಗ್ರಾಮಕ್ಕೆ ಸೇರಿದ ಅಟೋಗಳನ್ನು ತಮ್ಮ ಊರಿಗೆ ಬರಲು ಬಿಡುತ್ತಿಲ್ಲ. ಬಂದರವಾಡದ ಮೂಲಕ ತೆರಳುವ ವಾಹನದವರು ನಮ್ಮನ್ನು ಹತ್ತಿಸಿಕೊಳ್ಳುತ್ತಿಲ್ಲ ಎಂದು ಜನರು ತಿಳಿಸಿದ್ದಾರೆ.
ಸೋಂಕು ಹೆಚ್ಚಾದಂತೆ ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ. ಧರ್ಮ ಗುರುಗಳ ಸಲಹೆಯಂತೆ ಗ್ರಾಮದಲ್ಲಿ ಪೂಜೆ ಪುನಸ್ಕಾರ ಆರಂಭಿಸಿದ್ದಾರೆ. ಕಾಕತಾಳಿಯ ಎಂಬಂತೆ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆಯಂತೆ.