ಕಲಬುರಗಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಕಲ್ಯಾಣ ಮಂಟಪ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ರಾಜ್ಯ ಲೋಕಾಯುಕ್ತಕ್ಕೆ ದೂರು ಸಹ ಸಲ್ಲಿಕೆಯಾಗಿದೆ.
ನಗರದ ಪೊಲೀಸ್ ಭವನ ಕಟ್ಟಡದ ಪಕ್ಕದಲ್ಲಿ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಸ್ಮಾರಕ ಸಮಿತಿಗೆ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಎಂದು 1981 ಆಗಸ್ಟ್ 6 ರಂದು 36 ಸಾವಿರ ಚದರ ಅಡಿ ವಿಸ್ತೀರ್ಣದ ನಿವೇಶನವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿತ್ತು. ಆಗ ಸ್ವತಃ ಕಂದಾಯ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಅಂದಿನ ರಾಜ್ಯ ಸರ್ಕಾರಕ್ಕೆ ನಿವೇಶನ ಕೋರಿ ಪತ್ರ ಬರೆದ ಕಾರಣಕ್ಕೆ ನಿವೇಶನ ಮಂಜೂರು ಮಾಡಲಾಗಿತ್ತು. ಅದರನ್ವಯ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿತ್ತು.
ಆದರೆ, ಕಳೆದ 4 ವರ್ಷಗಳಿಂದ ಈ ಕಲ್ಯಾಣ ಮಂಟಪದಲ್ಲಿ ಮದುವೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಬದಲಿಗೆ, ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿ (ಕೆಪಿಇಎಸ್) ಕಚೇರಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ ಮಣಿಕಂಠ ರಾಠೋಡ್ ಲೋಕಾಯುಕ್ತ ಕಚೇರಿಗೆ ದೂರು ದಾಖಲಿಸಿದ್ದಾಗಿ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಪೀಪಿಲ್ಸ್ ಎಜುಕೇಶನ್ ಸೊಸೈಟಿಯ ಸ್ಥಾಪಕ ಅಧ್ಯಕ್ಷರಾಗಿದ್ದರು. ಸದ್ಯ ಅವರು ಸೊಸೈಟಿಯಲ್ಲಿ ಯಾವುದೇ ಹುದ್ದೆ ಹೊಂದಿಲ್ಲ. ಆದರೆ, ಇವರ ಮಗ ಪ್ರಿಯಾಂಕ್ ಖರ್ಗೆ ಅದರ ಸದಸ್ಯರಾಗಿದ್ದಾರೆ. ಷರತ್ತಿನ ಪ್ರಕಾರ ಈ ನಿವೇಶನದಲ್ಲಿ ಕಲ್ಯಾಣ ಮಂಪಟ ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗಳನ್ನು ನಡೆಸುವಂತಿಲ್ಲ.
ಆದರೆ, ತಮ್ಮ ಪ್ರಭಾವ ಮತ್ತು ಅಧಿಕಾರ ದುರುಪಯೋಗ ಮಾಡಿಕೊಂಡು ಪೀಪಲ್ಸ್ ಎಜುಕೇಷನ್ ಸೊಸೈಟಿಯ ಕಚೇರಿಯನ್ನು ತೆರೆಯಲಾಗಿದೆ. ಈ ಪ್ರದೇಶದ ಸದ್ಯದ ಮಾರುಕಟ್ಟೆ ದರ 50 ಕೋಟಿ ಇದೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದೇನೆ ಎಂದು ರಾಠೋಡ ಹೇಳಿದರು.
ಇದನ್ನೂ ಓದಿ: ಜನಾರ್ದನ್ ರೆಡ್ಡಿ ಹೊಸ ಪಕ್ಷ ಘೋಷಣೆ: ಮತಗಳ ವಿಭಜನೆ ಭಯ.. ಹೈಕಮಾಂಡ್ ಜೊತೆ ಇಂದು ಸಿಎಂ ಚರ್ಚೆ