ಕಲಬುರಗಿ: ಕಳೆದ ಭಾನುವಾರ ವಾಡಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು ಸಂಸದ ಡಾ. ಉಮೇಶ್ ಜಾಧವ್ ಅವರಿಗೆ ಘೇರಾವ್ ಹಾಕಿರುವುದನ್ನು ಖಂಡಿಸಿ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ್ ಚವ್ಹಾಣ ಎಸ್ ಪಿ ಅವರಿಗೆ ದೂರು ನೀಡಿದ್ದಾರೆ.
ಎರಡು ವರ್ಷದ ಬಾಲಕನಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ ವಾಡಿಯ ನಾಲ್ಕೂ ಬಡಾವಣೆಗಳನ್ನು ಸೀಲ್ಡೌನ್ ಮಾಡಲಾಗಿತ್ತು. ಬಾಲಕ ಗುಣಮುಖನಾಗಿ ಮನೆಗೆ ವಾಪಸ್ ಬಂದಿದ್ದರಿಂದ ಹಾಗೂ ಸೀಲ್ಡೌನ್ ಅವಧಿ ಪೂರ್ಣಗೊಂಡ ಕಾರಣ ಹಾಕಿದ್ದ ಎಲ್ಲ ನಿರ್ಬಂಧಗಳನ್ನ ತೆರವುಗೊಳಿಸಲು ಅಧಿಕಾರಿಗಳೊಂದಿಗೆ ಸಂಸದರು ಆಗಮಿಸಿದ್ದರು. ಈ ವೇಳೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಸಂಸದರಿಗೆ, ನಿಷೇಧ ತೆರವುಗೊಳಿಸದಂತೆ ಅಡ್ಡಿ ಪಡಿಸಿದ್ದರು.

ಸೀಲ್ಡೌನ್ ವೇಳೆ, ನಾಲ್ಕೂ ಪ್ರದೇಶದ ಜನ ಹಸಿವು ಹಾಗೂ ನೀರಿನ ದಾಹದಿಂದ ಪರಿತಪ್ಪಿಸಿದ್ದರು. ಈ ಕಡೆ ನೋಡದ ನೀವು ಸೀಲ್ಡೌನ್ ತೆರವುಗೊಳಿಸಲು ಬಂದಿದ್ದೀರಲ್ಲ, ಇದೇನು ಕಾಮಗಾರಿ ಉದ್ಘಾಟನೆಯಾ ಎಂದು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಅರವಿಂದ್ ಚೌಹಾಣ್ ಕಾಂಗ್ರೆಸ್ ವಿರುದ್ಧ ದೂರು ನೀಡಿದ್ದಾರೆ. ಗುಂಪು ಕಟ್ಟಿಕೊಂಡು ಬಂದ ಕೆಲವರು ಸಂಸದರ ಜೊತೆ ಅನುಚಿತವಾಗಿ ವರ್ತಿಸಿ, ಹಲ್ಲೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಏಳು ಜನರ ವಿರುದ್ಧ ಎಸ್ ಪಿ ಅವರಿಗೆ ಚೌಹಾಣ್ ದೂರು ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದವರ ವಿರುದ್ದ ಕೇಸ್ ದಾಖಲಿಸಿ ರೌಡಿ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ನಿಂದ ಪ್ರತಿದೂರು:
ಈ ಘಟನೆಗೆ ಸಂಬಂಧಿಸಿದಂತೆ ವಾಡಿ ಪುರಸಭೆ ಸದಸ್ಯ ಶರಣಬಸವ ನಾಟೇಕರ್ ಅವರು, ವಾಡಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದ್ದನೆ ಆರೋಪದಡಿ ಜಿಪಂ ಸದಸ್ಯರ ವಿರುದ್ಧ ಪ್ರತಿ ದೂರು ಸಲ್ಲಿಸಿದ್ದಾರೆ. ಲಾಕ್ಡೌನ್ ಹಿನ್ನೆಲೆ ಗುಂಪು ಕಟ್ಟಿಕೊಂಡು ತಿರುಗಾಡಬಾರದು ಎಂದು ಸರ್ಕಾರದ ಆದೇಶವಿದೆ. ಆದರೆ, ಸಂಸದರು ತಮ್ಮ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಗುಂಪು ಕಟ್ಟಿಕೊಂಡು ಜಿಲ್ಲೆಯಾದ್ಯಂತ ಪ್ರಚಾರದ ಗೀಳಿಗಾಗಿ ತಿರುಗಾಡುತ್ತಿದ್ದಾರೆ. ಅಲ್ಲದೇ ಸೀಲ್ಡೌನ್ ಪ್ರದೇಶದ ಜನರ ನೆರವಿಗೆ ಬಾರದನ್ನು ಪ್ರಶ್ನಿಸಿದ್ದಕ್ಕೆ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ ಚವ್ಹಾಣ ಅವರು ತಮ್ಮ ಬೆಂಬಲಿಗರೊಂದಿಗೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.