ಕಲಬುರಗಿ: ಕಲ್ಯಾಣ ಕರ್ನಾಟಕಕ್ಕಾಗಿ ಪ್ರತ್ಯೇಕ ಸೆಕ್ರಟರಿಯೇಟ್ ಸ್ಥಾಪನೆ ಮಾಡಿ ಹಿಂದುಳಿದ ಭಾಗದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವ ಮೂಲಕ ಈ ಭಾಗದ ಜನರ ಆಶೋತ್ತರಗಳಿಗೆ ನಮ್ಮ ಸರ್ಕಾರ ಸ್ಪಂದಿಸಲಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಉತ್ಸವದ ಉದ್ಘಾಟನೆಗೆ ವಿಶೇಷ ವಿಮಾನದ ಮೂಲಕ ಸರಡಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಮಾಧ್ಯಮದೊಂದಿಗೆ ಮಾತನಾಡಿ, ಕೇವಲ ಕಲ್ಯಾಣ ಕರ್ನಾಟಕ ಅಂತ ಹೆಸರು ಬದಲಾವಣೆ ಮಾಡಿದ್ರೆ ಏನೂ ಉಪಯೋಗವಿಲ್ಲ. ಪ್ರತ್ಯೇಕ ಸೆಕ್ರಟರಿಯೇಟ್ ಸ್ಥಾಪಿಸಿ ವಿಶೇಷ ಅನುದಾನ ನೀಡುತ್ತೇನೆ ಎಂದರು
ಮುಂದಿನ ದಿನದಲ್ಲಿ ಈ ಭಾಗಕ್ಕೂ ಸಂಪುಟದಲ್ಲಿ ಆದ್ಯತೆ ನೀಡ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಈ ಬಾರಿ ಪ್ರವಾಹ ಉಂಟಾಗಿರೋದರಿಂದ ಹೆಚ್ಚಿನ ಅನುದಾನ ನೀಡಲಾಗ್ತಿಲ್ಲ. ಮುಂದಿನ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡಿ, ಹಿಂದುಳಿದ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಳ್ತೇನೆ ಎಂದು ಹೇಳಿದರು.
ಬಿಜೆಪಿ ಮುಖಂಡರ ದಂಡೆ ವಿಮಾನ ನಿಲ್ದಾಣದತ್ತ ಹರಿದುಬಂದಿದೆ. ಸ್ವಾಗತಕ್ಕೆ ಆಗಮಿಸಿದ ಬಿಜೆಪಿ ಮುಖಂಡರನ್ನು ವಿಮಾನ ನಿಲ್ದಾಣದ ಒಳಗಡೆ ಬಿಡಲು ಪೊಲೀಸರು ನಿರಾಕರಿಸಿದರು. ಈ ವೇಳೆ, ಪೊಲೀಸ್ ಅಧಿಕಾರಿಗಳು ಮತ್ತು ಮುಖಂಡರ ನಡುವೆ ವಾಗ್ವಾದ ನಡೆಯಿತು.