ಕಲಬುರಗಿ/ಯಾದಗಿರಿ: 'ಮೋದಿ ಎಂದರೆ ವಿಷವನ್ನು ನುಂಗಿ ಇಡೀ ದೇಶದ ಹಿತ ಬಯಸುವ ನೀಲಕಂಠನಿದ್ದಂತೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು. ಶುಕ್ರವಾರ ಸೇಡಂ ಪಟ್ಟಣದಲ್ಲಿ ಅಭ್ಯರ್ಥಿ ರಾಜಕುಮಾರ್ ಪಾಟೀಲ್ ತೆಲ್ಕೂರ ಪರವಾಗಿ ಬೃಹತ್ ರೋಡ್ ಶೋ ಮೂಲಕ ಮತಯಾಚಿಸಿದರು. ಈ ವೇಳೆ ಮಾತನಾಡಿದ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
"ಪ್ರಧಾನಿ ಮೋದಿ ವಿಷದ ಹಾವು ಎಂದು ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು. ಖರ್ಗೆಯವರಿಗೆ ಇದು ಶೋಭೆ ತರುವುದಿಲ್ಲ. ಅವರಿಗೆ ಮೋದಿ ಅಂದ್ರೆ ಭಯ, ಮೋದಿ ನೇತೃತ್ವದಲ್ಲಿ ಎಲ್ಲೆಲ್ಲಿ ಚುನಾವಣೆಯಾಗಿದೆ ಅಲ್ಲಲ್ಲಿ ಕಾಂಗ್ರೆಸ್ ಪಕ್ಷ ನಿರ್ಣಾಮವಾಗಿದೆ. ಹೀಗಾಗಿ ಮೋದಿ ಹೆಸರು ಕೇಳಿದರೆ ಅವರಿಗೆ ನಿದ್ದೆ ಬರುವುದಿಲ್ಲ. ಈಗ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿದೆ. ಪ್ರಧಾನಿ ಆಗಮನದಿಂದ ಕಾಂಗ್ರೆಸ್ ಮುಕ್ತ ಕರ್ನಾಟಕವಾಗಲಿದೆ" ಎಂದರು.
ದೀನ ದಲಿತರಗೆ ಗೌರವ: "ಕಾಂಗ್ರೆಸ್‍ನ ಡಿ.ಕೆ.ಶಿವಕುಮಾರ್ ಹಾಗೂ ಸುರ್ಜೇವಾಲ ಮೀಸಲಾತಿ ಪಡೆದುಕೊಂಡವರು ಭಿಕ್ಷೆ ಬೇಡುವವರು ಎಂದು ಹೇಳಿಕೆ ನೀಡಿದ್ದಾರೆ. ಲಿಂಗಾಯತರು, ದೀನ ದಲಿತರು, ಹಿಂದುಳಿದವರು ಮೀಸಲಾತಿಯನ್ನು ಪಡೆದಿದ್ದಾರೆ. ಹಾಗದರೆ ಅವರು ಭಿಕ್ಷುಕರೇ ಎಂದು ಸಿಎಂ ಖಾರವಾಗಿ ಪ್ರಶ್ನಿಸಿದರು. ಚುನಾವಣೆಗಾಗಿ ಬಂದಾಗ ಮಾತ್ರ ದಲಿತರು ಇವರಿಗೆ ನೆನಪಾಗುತ್ತಾರೆ. 30 ವರ್ಷಗಳಿಂದ ಒಳ ಮೀಸಲಾತಿ ಮಾಡಲು ಮನಸ್ಸು ಮಾಡಲಿಲ್ಲ. ಆದರೆ ನಾನು ಬಂದ ಮೇಲೆ ಒಳಮೀಸಲಾತಿಯನ್ನು ಜಾರಿಗೆ ತರುವುದರ ಮೂಲಕ ದೀನ ದಲಿತರಗೆ ಗೌರವವನ್ನು ಕೊಟ್ಟಿದ್ದೇನೆ" ಎಂದು ತಿಳಿಸಿದರು.
ರೋಡ್ ಶೋನಲ್ಲಿ ತೆಲ್ಕೂರ ಅವರಿಗೆ ಬೆಂಬಲ ನೀಡಲು ಜನರು ಬಂದಿರುವುದನ್ನು ನೋಡಿದರೆ ನನಗೆ ತುಂಬಾ ಸಂತೋಷವಾಗುತ್ತಿದೆ. ಮೇ 10 ರಂದು ತೆಲ್ಕೂರ ಅವರಿಗೆ ಮತ್ತೊಮ್ಮೆ ಹೆಚ್ಚಿನ ಮತ ನೀಡುವ ಮೂಲಕ ರಾಜ್ಯದಲ್ಲಿ ಮತ್ತೆ ಕಮಲ ಅರಳಿಸಿ ನವ ಕರ್ನಾಟಕ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಸಿಎಂ ಮನವಿ ಮಾಡಿದರು.
ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ ಅವರು ಮತ್ತೊಮ್ಮೆ 30 ಸಾವಿರಕ್ಕೂ ಹೆಚ್ಚು ದಾಖಲೆ ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿ ಸೇಡಂನ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ. ಸೇಡಂ ಕ್ಷೇತ್ರದಲ್ಲಿ ಸುಮಾರು 15 ವರ್ಷಗಳು ಶಾಸಕರಾಗಿ, ಸಚಿವರಾಗಿ ಆಡಳಿತ ನಡೆಸಿದ ಶರಣ ಪ್ರಕಾಶ ಪಾಟೀಲರು ಮಾಡದ ಅಭಿವೃದ್ಧಿಯನ್ನು ಕೇವಲ 5 ವರ್ಷಗಳಲ್ಲಿ ತೆಲ್ಕೂರ ಶಾಸಕರಾಗಿದ್ದುಕೊಂಡು ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಭಾಗದ ರೈತರಿಗಾಗಿ ಶಾಶ್ವತವಾಗಿ ಉಪಯೋಗವಾಗುವ ಕಾಗಿಣಾ ಯೋತ ನೀರಾವರಿ ಯೋಜನೆಯನ್ನು ಬೆನ್ನು ಬಿಡದೆ ಜಾರಿಗೊಳಿಸಿ 'ಆಧುನಿಕ ಭಗೀರಥ' ಏನಿಸಿಕೊಂಡಿದ್ದಾರೆ ಎಂದು ತೆಲ್ಕೂರ ಅವರನ್ನು ಸಿಎಂ ಹಾಡಿ ಹೊಗಳಿದರು.
ವಿಶ್ವದಲ್ಲಿಯೇ ಮೋದಿ ಬಲಿಷ್ಠ ನಾಯಕ-ಶೃತಿ: ಖ್ಯಾತ ಚಿತ್ರ ನಟಿ ಹಾಗೂ ಬಿಜೆಪಿ ನಾಯಕಿ ಶೃತಿ ಮಾತನಾಡಿ "ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ನಾಯಕ ಏನಿಸಿಕೊಂಡಿರುವ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಲು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರದ ಅವಶ್ಯಕತೆ ಇದೆ. ಹೀಗಾಗಿ ಸೇಡಂ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಗಳು ಹಣ, ಹೆಂಡದ ಹೊಳೆ ಹರಿಸಿದರು ತಲೆ ಕೆಡಿಸಿಕೊಳ್ಳದೆ ಸದಾ ಅಭಿವೃದ್ಧಿ ಕುರಿತು ಚಿಂತಿಸುವ ರೈತ ನಾಯಕ ರಾಜಕುಮಾರ್ ಪಾಟೀಲ್ ತೆಲ್ಕೂರ ಅವರನ್ನು ಅಭೂತ ಪೂರ್ವ ಮತಗಳನ್ನು ನೀಡುವ ಮೂಲಕ ಗೆಲ್ಲಿಸಬೇಕು" ಎಂದು ಮನವಿ ಮಾಡಿದರು
ತಾಕತ್ತು, ದಮ್ಮು ಇದ್ದರೆ ಬಿಜೆಪಿಯನ್ನು ಸೋಲಿಸಿ: ಯಾದಗಿರಿ ಜಿಲ್ಲೆಯ ಶಹಾಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೀನರೆಡ್ಡಿ ಪಾಟೀಲ ಯಾಳಗಿ ಪರ ಸಿಎಂ ಬಸವರಾಜ ಬೊಮ್ಮಾಯಿ ಶಹಾಪುರ ನಗರದ ಸಿ. ಬಿ ಕಮಾನ್ನಿಂದ ಬಸವೇಶ್ವರ ವೃತ್ತದವರಗೆ ಭರ್ಜರಿ ರೋಡ್ ಶೋ ನಡೆಸಿದರು. ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ "ಬಿಜೆಪಿಯನ್ನು ಸೋಲಿಸಲು ರಾಹುಲ್ ಗಾಂಧಿ, ಖರ್ಗೆ ಸೇರಿದಂತೆ ಯಾರೇ ಬರಲಿ ಕರ್ನಾಟಕದಲ್ಲಿ ಕೇಸರಿ ಅಲೆ ತಡೆಯಲು ಸಾಧ್ಯವಿಲ್ಲ. ನಿಮಗೆ ತಾಕತ್ತು, ದಮ್ಮು ಇದ್ದರೆ ಬಿಜೆಪಿಯನ್ನು ಸೋಲಿಸಿ ಎಂದು ಕಾಂಗ್ರೆಸ್ಗೆ ಸವಾಲು ಹಾಕಿದರು.
ಬಸವರಾಜ ಬೊಮ್ಮಾಯಿ ಓಡಿ ಹೋಗುವ ಹೇಡಿಯಲ್ಲ. ಇಲ್ಲೇ ಇದ್ದು ನನ್ನ ತಾಕತ್ತು ತೋರಿಸುತ್ತೇನೆ. ಲಿಂಗಾಯಿತರ ಮುಖ್ಯಮಂತ್ರಿಗಳು ಭ್ರಷ್ಟರೆಂದು ಹೇಳುವ ಕಾಂಗ್ರೆಸ್ಸಿನವರು ತಾವು ಎಷ್ಟು ಸಾಚಾ ಎಂದು ಹೇಳಲಿ ನೋಡೋಣ. ಅವರು ಭ್ರಷ್ಟರೆಂದು ಹೇಳಿದ ಮಾತ್ರಕ್ಕೆ ನೀವು ಒಪ್ಪಿಕೊಳ್ಳುತ್ತೀರಾ?, ಈ ಕ್ಷೇತ್ರದ ಶಾಸಕ ಶರಣ ಬಸಪ್ಪಗೌಡ ಒಪ್ಪಿಕೊಳ್ಳುತ್ತಾರಾ? ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನವರು 70 ವರ್ಷ ಆಡಳಿತ ನಡೆಸಿ ದೇಶ ಒಡೆದಿದ್ದೀರಿ. ಈಗ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದೀರಿ. ಇಷ್ಟು ದಿನ ಸುಳ್ಳಿನಿಂದ, ಮೋಸದಿಂದ ಆಡಳಿತ ನಡೆಸಿದ್ದೀರಿ. ಇನ್ನು ಮುಂದೆ ನಿಮ್ಮ ಆಟ ನಡೆಯುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಬಸವರಾಜ ಬೊಮ್ಮಾಯಿಗೆ ನಟಿ ಶೃತಿ, ಶಾಸಕ ರಾಜುಗೌಡ ಸಾಥ್ ನೀಡಿದರು. ರೋಡ್ ಶೋ ವೇಳೆ ಬಿಜೆಪಿ ಕಾರ್ಯಕರ್ತರು ಡಿಜೆ ಸೌಂಡ್ಗೆ ಸಖತ್ ಡ್ಯಾನ್ಸ್ ಮಾಡಿದರು. ರೋಡ್ ಶೋದಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.
ಇದನ್ನೂ ಓದಿ: ಕಲಬುರಗಿಯಲ್ಲಿ ಎಲೆಕ್ಷನ್‌ಗೂ ಮೊದಲೇ ಪ್ರಾಮಿಸ್ ಪಾಲಿಟಿಕ್ಸ್: ಗೆಳೆಯನ ಪರ ತೆಲ್ಕೂರ ಮತಬೇಟೆ