ಕಲಬುರಗಿ: ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಿಂದಗಿ ಹಾನಗಲ್ ಉಪ ಚುನಾವಣೆ ಮೂಲಕ ಜನರೇ ಉತ್ತರ ಕೊಡ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಂದಗಿ ಬೈ ಎಲೆಕ್ಷನ್ ಪ್ರಚಾರಕ್ಕೆ ತೆರಳಲು ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಸಿಎಂ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಆಡೋ ಮಾತಿಗೆ ನಾನು ಉತ್ತರ ನೀಡುವುದಿಲ್ಲ. ಸಿಂದಗಿ-ಹಾನಗಲ್ ಉಪ ಚುನಾವಣೆ ಮುಗಿಯಲಿ. ಆಗ ಅವರಿಗೆ ಗೊತ್ತಾಗುತ್ತದೆ. ಎರಡು ಕ್ಷೇತ್ರದ ಜನರೇ ಸಿದ್ದರಾಮಯ್ಯ ಅವರಿಗೆ ಉತ್ತರ ಕೊಡುತ್ತಾರೆ ಎಂದರು.
371 ಜೆ ಕೋಶವನ್ನು ಕಲಬುರಗಿಗೆ ಸ್ಥಳಾಂತರ ಮಾಡಿ ಆದೇಶ ಹೊರಡಿಸಲಾಗಿದೆ. ಶೀಘ್ರದಲ್ಲೇ ಕಲಬುರಗಿಯಲ್ಲಿ ಆರಂಭಗೊಳ್ಳಲಿದೆ. ಕೆಕೆಆರ್‌ಡಿಬಿಗೆ 1500 ಕೋಟಿ ರೂಪಾಯಿ ಪ್ರತ್ಯೇಕ ಡಿಪಿಆರ್ ರೂಪಿಸಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದರು.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಹಾಗೂ ಕಾಳಗಿ ತಾಲೂಕಿನ ಹೊಸಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಕಂಪಿಸುತ್ತಿರುವ ಭೂ ಕಂಪನ ಬಗ್ಗೆ ಅವರು ಮಾತನಾಡಿದರು. ಭೂಕಂಪ ಪೀಡಿತ ಹಳ್ಳಿಗರಿಗೆ ಸೂಕ್ತ ಕ್ರಮ ಕೈಗೊಂಡು, ಪರಿಹಾರ ನೀಡಲು ಹಾಗೂ ಶೆಡ್ ನಿಮಿ೯ಸಲು ಈಗಾಗಲೇ ಹೇಳಲಾಗಿದೆ. ಕಲಬುರಗಿ ಜಿಲ್ಲಾಧಿಕಾರಿ ಭೇಟಿ ನೀಡಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್ ಕೂಡ ಸ್ಥಳದಲ್ಲಿದ್ದಾರೆ. ತಜ್ಞರ ವರದಿ ಬಂದ ಬಳಿಕ ಎಲ್ಲರಿಗೂ ವೈಯಕ್ತಿಕ ಶೆಡ್ ನಿಮಿ೯ಸಲು ನಿಧಾ೯ರ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಓದಿ: ಹಿಂದೂತ್ವದ ರಕ್ತ ನನ್ನ ಮೈಯಲ್ಲಿ ಹರಿಯುತ್ತಿದೆ : ಶಾಸಕ ರೇಣುಕಾಚಾರ್ಯ