ಕಲಬುರಗಿ: ಗ್ರಾಮ ಪಂಚಾಯತ್ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆ ಮತ ಹಾಕುವ ವಿಚಾರಕ್ಕಾಗಿ ಬಿಜೆಪಿ ಬೆಂಬಲಿತರ ಅಭ್ಯರ್ಥಿಗಳ ನಡುವೆಯೇ ಮಾರಾಮಾರಿಯಾದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಯಾಗಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮ ಪಂಚಾಯಿತಿ ಸದಸ್ಯೆ ಶಾರುಬಾಯಿ ಅವರು ತಮ್ಮ ಪತಿ ಮೇಲೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಮದನ್ ಹೇಮ್ಲಾ ಹಾಗೂ ಆತನ ಬೆಂಬಲಿಗರು ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದಾರೆ. ಯಾಗಾಪುರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 23 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕೇವಲ ನಾಲ್ಕು ಜನ ಸದಸ್ಯರಿದ್ದು, ಅಧ್ಯಕ್ಷ ಸ್ಪರ್ಧಿಯಾಗಿದ್ದ ಮದನ್ ಹೇಮ್ಲಾ ಬಿಜೆಪಿ ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ, ಉಪಾಧ್ಯಕ್ಷ ಆಯ್ಕೆಯಲ್ಲಿ ಮದನ್ ಬೆಂಬಲಿತ ಅಭ್ಯರ್ಥಿಗೆ ಮತ ನೀಡುವುದಾಗಿ ಮಾತುಕೊಟ್ಟಿದ್ದ ಸದಸ್ಯೆ ಶಾರುಬಾಯಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ತಮ್ಮ ಸಂಬಂಧಿಕರಿಗೆ ಗುಟ್ಟಾಗಿ ಮತದಾನ ಮಾಡಿದ್ದಾರೆ. ಈ ಕಾರಣದಿಂದಾಗಿ ಬಿಜೆಪಿ ಪಕ್ಷದಿಂದಲೇ ಕಮಲಾಬಾಯಿ ಮೇಘನಾಥ್ ಅವರು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಸದಸ್ಯೆ ಶಾರುಬಾಯಿ ನೀಡಿದ ದೂರಿನ ಅನ್ವಯ ಗ್ರಾ.ಪಂ ನೂತನ ಅಧ್ಯಕ್ಷ ಮದನ್ ಹೇಮ್ಲಾ ಸೇರಿ ಎಂಟು ಜನರ ವಿರುದ್ಧ ಎಫ್ಐಆರ್ ದಾಖಲಾಗಿರುವುದಾಗಿ ವಾಡಿ ಠಾಣೆ ಪಿಎಸ್ಐ ವಿಜಯಕುಮಾರ್ ಬಾವಗಿ ತಿಳಿಸಿದ್ದಾರೆ.