ಕಲಬುರಗಿ: ಕಾರು ಪಲ್ಟಿಯಾಗಿ ಬಾಲಕ ಸೇರಿ ಇಬ್ಬರು ಮೃತಪಟ್ಟು, ಏಳು ಜನರಿಗೆ ಗಂಭೀರ ಗಾಯಗಳಾದ ಘಟನೆ ಚಿತ್ತಾಪುರ ತಾಲೂಕಿನ ಹಳಕರ್ಟಿ-ಲಾಡ್ಲಾಪುರ ಗ್ರಾಮಗಳ ನಡುವಿನ ರಾಷ್ಟ್ರೀಯ ಹೆದ್ದಾರಿ-150ರಲ್ಲಿ ಇಂದು ಸಂಭವಿಸಿದೆ.
ಶಹಬಾದ್ ಪಟ್ಟಣದ ನಿಜಾಂಬಜಾರ್ ನಿವಾಸಿಗಳಾದ ದಯಾನಂದ ದೇವಸಿಂಗ್ (8) ಮತ್ತು ರಮೇಶ ಪವಾರ (45) ಮೃತರು. ದೇವರ ಕಾರ್ಯಕ್ಕೆಂದು ಹೋಗಿ ಮರಳುವಾಗ ದುರ್ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ಐ ತಿರುಮಲೇಶ ಕುಂಬಾರ ಹಾಗೂ ಸಿಬ್ಬಂದಿ ಗಾಯಾಳುಗಳನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಲಿಸುತ್ತಿದ್ದ ವಾಹನಕ್ಕೆ ದಿಢೀರ್ ಬೆಂಕಿ: ಚಲಿಸುತ್ತಿದ್ದ ವಾಹನದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ವಾಹನವೊಂದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಚಿಂಚೋಳಿ ತಾಲೂಕಿನ ನರನಾಳ ಗ್ರಾಮದ ಬಳಿ ನಡೆದಿದೆ. ವಾಹನದಲ್ಲಿ ಚಾಲಕ ಸೇರಿ ಆರು ಜನರಿದ್ದರು. ಬೆಂಕಿ ಕಾಣಿಸಿಕೊಂಡ ತಕ್ಷಣ ವಾಹನ ನಿಲ್ಲಿಸಿ ಹೊರಬಂದಿದ್ದಾರೆ. ಎಲ್ಲರಿಗೂ ಚಿಕ್ಕ-ಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ದೌಡಾಯಿಸಿದ ಆಗ್ನಿ ಶಾಮದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಚಿಂಚೋಳಿ ಪಿಎಸ್ಐ ಹಣಮಂತಪ್ಪ ಬಂಕಲಗಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ದಸರಾಗೆ ತಂದಿದ್ದ ಆನೆಯನ್ನು ವಾಪಸ್ ಒಯ್ಯುತ್ತಿದ್ದ ವೇಳೆ ವಾಹನ ಅಪಘಾತ.. ಚಾಲಕ ಸ್ಥಳದಲ್ಲೇ ಸಾವು