ಕಲಬುರಗಿ: ಚಿಂಚೋಳಿ ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಮುನ್ನ ಎರಡು ರಾಷ್ಟ್ರೀಯ ಪಕ್ಷಗಳು ಶುಕ್ರವಾರ ಸಂಜೆ ಅಬ್ಬರದ ಪ್ರಚಾರ ಕೈಗೊಂಡವು. ಚಿಂಚೋಳಿ ಪಟ್ಟಣದಲ್ಲಿ ಕಾಂಗ್ರೆಸ್ ಭರ್ಜರಿಯಾಗಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿತು. ಕಾಂಗ್ರೆಸ್ ಅಭ್ಯರ್ಥಿ ಸುಭಾಶ್ ರಾಥೋಡ ಪರ ನಡೆದ ರೋಡ್ ಶೋದಲ್ಲಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವ ಪ್ರಿಯಾಂಕ್ ಖರ್ಗೆ, ರಹಿಂಖಾನ್, ಶಾಸಕ ಅಜಯಸಿಂಗ್ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದರು.
ಚಿಂಚೋಳಿ ಪಟ್ಟಣದ ಬಡಿ ದರ್ಗಾದಿಂದ ಆರಂಭಗೊಂಡ ಮೆರವಣಿಗೆ ಚಿಂಚೋಳಿ ಹೊರವಲಯದವರೆಗೆ ನಡೆಯಿತು. ಮಾರ್ಗದುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು, ಮಹಿಳಾ ಬೆಂಬಲಿಗರು ಕುಣಿದು ಸಾರ್ವಜನಿಕರ ಗಮನ ಸೆಳೆದರು.
ಪ್ರಿಯಾಂಕ್ ಎಲ್ಲಿದ್ದೀಯಪ್ಪ: ಮೆರವಣಿಗೆ ಮಧ್ಯೆ ಮಾತನಾಡಿದ ಡಿಸಿಎಂ, ಪ್ರಿಯಾಂಕ್ ಎಲ್ಲಿದ್ದೀಯಪ್ಪ, ಪ್ರಿಯಾಂಕ್ ಎಲ್ಲಿದ್ದೀಯಪ್ಪ ಹೀಗೆ ಎರಡು ಬಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಮೈಕ್ನಲ್ಲಿ ಕೂಗಿ ಎಲ್ಲರನ್ನು ರಂಜಿಸಿದರು. ಬಳಿಕ ಮಾತನಾಡಿದ ಅವರು, ಜಾಧವ್ ವಿರುದ್ಧ ಕಿಡಿಕಾರಿದರು.
ಬಿಜೆಪಿಯವರು ಸುಳ್ಳು ಪ್ರಚಾರ ಮಾಡಿಕೊಂಡು ಬರುತ್ತಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರ ಮಾಡುತ್ತಿರುವ ಬಿಜೆಪಿಯವರು, ಕಿಳುಮಟ್ಟದ ರಾಜಕಾರಣ ನಡೆಸುತ್ತಿದ್ದಾರೆ. ಎಲ್ಲವನ್ನು ಗಮನಿಸುತ್ತಿರುವ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಥೋಡ ಅವರನ್ನು ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.