ಕಲಬುರಗಿ: ಮಧ್ಯಾಹ್ನದ ಬಿಸಿಯೂಟ ಆಯ್ತು. ಇದೀಗ ಬೆಳಗಿನ ಉಪಹಾರ ನೀಡೊ ಸುಳಿವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೀಡಿದ್ದಾರೆ.
ಕಲಬುರ್ಗಿ ಜಿಲ್ಲೆ ಕಮಲಾಪುರ ತಾಲೂಕಿನ ನವಣಿಹಾಳ ಗ್ರಾಮದ ಬಳಿಯಿರುವ ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯದ ಆವರಣದಲ್ಲಿ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹುಟ್ಟುಹಬ್ಬದ ನಿಮಿತ್ತ ಅದಮ್ಯ ಚೇತನ ಹಾಗೂ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ಗಳ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರ ಕಾರ್ಯಕ್ರಮ ಆರಂಭಿಸಲಾಯಿತು. ಕಾರ್ಯಕ್ರಮಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಅದಮ್ಯ ಚೇತನ ಹಾಗೂ ಅನ್ನಪೂರ್ಣ ಟ್ರಸ್ಟ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸದ್ಯ 10 ಸಾವಿರ ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರ ನೀಡೋ ಯೋಜನೆ ಉದ್ಘಾಟಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರವಿದ್ದು, ಮುಂದಿನ ದಿನಗಳಲ್ಲಿ ಹೋಬಳಿ, ತಾಲೂಕು ಮಟ್ಟಕ್ಕೂ ವಿಸ್ತರಿಸಲಾಗುವುದು. ರಾಜ್ಯದ ಇತರೆಡೆಯಲ್ಲಿಯೂ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರ ನೀಡೋ ಚಿಂತನೆ ಮಾಡಲಾಗಿದೆ ಎಂದರು.
ನಂತರ ಮಾತನಾಡಿದ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ನ ಸದ್ಗುರು ಮಧುಸೂಧನ್ ಸಾಯಿ, ದಿವಂಗತ ಅನಂತಕುಮಾರ್ ಹೆಸರಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಸದ್ಯ ನಮಗೆ 10 ಸಾವಿರ ವಿದ್ಯಾರ್ಥಿಗಳಿಗೆ ಉಪಹಾರ ತಯಾರಿಸೋ ಅವಕಾಶ ಇರೋದ್ರಿಂದ ಅಷ್ಟು ಜನರಿಗೆ ಮಾತ್ರ ವ್ಯವಸ್ಥೆ ಮಾಡ್ತಿದ್ದೇವೆ. ಇದನ್ನು ಸರ್ಕಾರ ವಿಸ್ತರಿಸುವ ಮೂಲಕ ಎಲ್ಲ ವಿದ್ಯಾರ್ಥಿಗಳಿಗೂ ಉಪಹಾರ, ಪೌಷ್ಠಿಕ ಆಹಾರ ನೀಡುವಂತಾಗಬೇಕು ಎಂದರು.
ಹಿಂದುಳಿದ ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನಲ್ಲಿ ಬೆಳಗಿನ ಉಪಹಾರ ಕೊಡೋ ಯೋಜನೆಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಬೇರೆ ಶಾಲೆಗಳ ಮಕ್ಕಳಿಗೂ ಬೆಳಗಿನ ಉಪಹಾರ ಹಾಗೂ ಪೌಷ್ಠಿಕ ಆಹಾರ ನೀಡೋ ಮುನ್ಸೂಚನೆ ನೀಡಿರೋ ಸಚಿವ ಸುರೇಶ್ ಕುಮಾರ್, ಪಿಯುಸಿ ವಿದ್ಯಾರ್ಥಿಗಳಿಗೂ ಮಧ್ಯಾಹ್ನ ಬಿಸಿಯೂಟ ನೀಡಬೇಕೆಂಬ ಬೇಡಿಕೆ ಕುರಿತು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.