ಕಲಬುರಗಿ : ಬಿಸಿಲುನಾಡಿನಲ್ಲಿ ಲೋಕ ಸಮರ ಜೋರಾಗಿ ನಡೆಯುತ್ತಿದೆ. ಕಾಂಗ್ರೆಸ್ ಸೋಲಿಸಲು ಪಣ ತೊಟ್ಟಿರುವ ಕಮಲ ಪಾಳಯ, ಕಾಂಗ್ರೆಸ್ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನ ಶತಾಯಗತಾಯವಾಗಿ ಸೋಲಿಸಬೇಕು ಅಂತ ಮಾಜಿ ಕಾಂಗ್ರೆಸ್ ನ ನಾಯಕರುಗಳೇ ಪಣತೊಟ್ಟು ನಿಂತಿದ್ದಾರೆ. ಕಲಬುರಗಿ ಲೋಕಸಭಾ ಕ್ಷೇತ್ರ ಈಗ ಜಿದ್ದಾಜಿದ್ದಿ ಕ್ಷೇತ್ರವಾಗಿ ರಾಜ್ಯ ಸೇರಿದಂತೆ ರಾಷ್ಟ್ರಮಟ್ಟದ ಗಮನ ಸೆಳೆಯುತ್ತಿದೆ.
9 ಬಾರಿ ವಿಧಾನಸಭೆಯಿಂದ, 2 ಬಾರಿ ಲೋಕಸಭೆಯಿಂದ ಸ್ಪರ್ಧಿಸಿ ಗೆಲುವನ್ನ ಸಾಧಿಸುವ ಮೂಲಕ ಕೇಂದ್ರದಲ್ಲಿ ತಮ್ಮ ವರ್ಚಸನ್ನ ಹೆಚ್ಚಿಸಿಕೊಂಡು ಹ್ಯಾಟ್ರಿಕ್ ಗೆಲುವಿನತ್ತ ದಾಪುಗಾಲು ಹಾಕುತ್ತಿರುವ ಮಲ್ಲಿಕಾರ್ಜುನ್ ಖರ್ಗೆಯವರಿಗೆ ಈ ಬಾರಿ ಪುತ್ರ ವ್ಯಾಮೋಹದ ಕಗ್ಗಂಟು ಅರಗಿಸಿಕೊಳ್ಳದಂತಾಗಿದೆ. ಜಿಲ್ಲೆಯ ಹಿರಿಯ ನಾಯಕರುಗಳನ್ನ ಕಡೆಗಣಿಸುವ ಮೂಲಕ ತಮ್ಮ ಪುತ್ರ ಪ್ರಿಯಾಂಕ ಖರ್ಗೆಯವರನ್ನ ಎರಡು ಬಾರಿ ಮಂತ್ರಿ ಮಾಡಿದ್ದಾರೆ ಅನ್ನೋ ಆರೋಪಗಳು ಕೇಳಿ ಬರುತ್ತಿವೆ.
ಈ ರಾಜಕಾರಣದಿಂದ ಪ್ರಭಾವಿ ಕಾಂಗ್ರೆಸ್ ನಾಯಕರುಗಳಾದ ಮಾಲಿಕಯ್ಯ ಗುತ್ತೆದಾರ, ಬಾಬುರಾವ ಚಿಂಚನಸೂರ್, ಎಬಿ ಮಾಲಕರೆಡ್ಡಿ ಸೇರಿದಂತೆ ಹಲವರು ಕೈ ಪಕ್ಷ ತೋರೆದು ಕಮಲ ಪಾಳಯಕ್ಕೆ ಸೇರಿದ್ದು ಕಾಂಗ್ರೆಸ್ ಮುಖಂಡರಲ್ಲಿ ಆಂತಕ ಮೂಡಿಸಿದೆ.
17 ಬಾರಿ ಲೋಕಸಭೆ ಚುನಾವಣೆಯಲ್ಲಿ ಎದೆಗುಂದದ ಕಾಂಗ್ರೆಸ್ ಗೆ ಈ ಬಾರಿ ನಡುಕ ಶುರುವಾಗಿದೆ. ಇದಕ್ಕೆ ಕಾರಣ ಚಿಂಚೋಳಿಯ ಕಾಂಗ್ರೆಸ್ ಪಕ್ಷದ ಶಾಸಕ ಉಮೇಶ ಜಾಧವ್ ಅವರನ್ನು ಬಿಜೆಪಿ ಪಕ್ಷ ಸೆಳೆದುಕೊಂಡು, ಖರ್ಗೆ ವಿರುದ್ದ ಕಣಕ್ಕಿಳಿಸಿದ್ದು. ಕಾಂಗ್ರೆಸ್ ಬದ್ರಕೋಟೆಗೆ ಲಗ್ಗೆ ಹಾಕಲು ಬಿಜೆಪಿ ರಾಜಕೀಯ ರಣತಂತ್ರ ರೂಪಿಸುತ್ತಿದೆ.
ಇಲ್ಲಿವರೆಗೆ ಗೆದ್ದವರು:
1951ರಲ್ಲಿ ಹೈದರಾಬಾದ ಸಂಸ್ಥಾನಕ್ಕೊಳಪಟ್ಟಿದ್ದ ಗುಲ್ಬರ್ಗಾ ಲೋಕಸಭೆಗೆ ಕಾಂಗ್ರೆಸ್ ಪಕ್ಷದಿಂದ ಸ್ವಾತಂತ್ರ ಹೋರಾಟಗಾರ ರಮಾನಂದ ತೀರ್ಥರು ಮೊದಲ ಸದಸ್ಯರಾದರು. ನಂತರ ಮಹಾದೇವಪ್ಪ ರಾಂಪೂರೆ ಮೂರು ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ರೆ ಧರ್ಮರಾವ್ ಅಫಜಲಪೂರಕರ್, ಸಿದ್ದರಾಮರೆಡ್ಡಿ, ಎನ್ ಧರ್ಮಸಿಂಗ್ ಕಾಂಗ್ರೆಸ್ ಪಕ್ಷದಿಂದಲೇ ಲೋಕಸಭೆ ಸದಸ್ಯರಾದರು. ಬದಲಾದ ರಾಜಕೀಯ ಬೆಳೆವಣಿಗೆ ಹಿನ್ನಲೆ 1980ರಲ್ಲಿ ಎನ್ ಧರ್ಮಸಿಂಗ್ ರಾಜೀನಾಮೆ ನೀಡಿದ್ದರು. ಆಗ ನಡೆದ ಉಪ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿಎಂ ಸ್ಟೇಫನ್ ಲೋಕಸಭೆ ಪ್ರವೇಶ ಮಾಡಿದರು. ನಂತರ 1984ರಲ್ಲಿ ಇದೇ ಕ್ಷೇತ್ರದಿಂದ ವೀರೇಂದ್ರ ಪಾಟೀಲರು ಸಂಸದರಾಗಿದ್ದಾರೆ. ಬಿ.ಜಿ. ಜವಳಿ, ಇಕ್ಬಾಲ್ ಅಹ್ಮದ್ ಸರಡಗಿ ಹಾಗೂ ಹಾಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ತಲಾ ಎರಡೆರಡು ಬಾರಿ ಲೋಕಸಭೆ ಸದಸ್ಯರಾಗಿ ಜನಸೇವೆ ಮಾಡಿದ್ದಾರೆ. ಜನತಾ ದಳದಿಂದ ಒಂದು ಬಾರಿ ಮಾಜಿ ಸಚಿವ ದಿ. ಖಮರುಲ್ ಇಸ್ಲಾಂ ಹಾಗೂ ಬಿಜೆಪಿಯಿಂದ ಒಂದುಬಾರಿ ಬಸವರಾಜ್ ಪಾಟೀಲ ಸೇಡಂ ಆಯ್ಕೆಯಾಗಿದ್ದು ಹೊರತುಪಡಿಸಿದ್ರೆ ಉಳಿದ 15 ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವ ಮೂಲಕ ಕಲಬುರಗಿಯನ್ನುತನ್ನ ಭದ್ರಕೋಟೆಯನ್ನಾಗಿಸಿಕೊಂಡಿದೆ.
ಪಕ್ಷಗಳ ಬಲಾಬಲ:
ವಿಧಾನಸಭಾ ಕ್ಷೇತ್ರ 8. 4 ಕಾಂಗ್ರೆಸ್, 1 ಜೆಡಿಎಸ್, 3 ಬಿಜೆಪಿ
1) ಕಲಬುರಗಿ ಉತ್ತರ- ಖನಿಜ್ ಫಾತಿಮಾ ಖಮರ್ ಉಲ್ ಇಸ್ಲಾಂ-ಕಾಂಗ್ರೆಸ್
2) ಕಲಬುರಗಿ ದಕ್ಷಿಣ- ದತ್ತಾತ್ರೇಯ ಪಾಟೀಲ ರೇವೂರ-ಬಿಜೆಪಿ
3) ಕಲಬುರಗಿ ಗ್ರಾಮೀಣ- ಬಸವರಾಜ ಮತ್ತಿಮಾಡ-ಬಿಜೆಪಿ
4) ಸೇಡಂ- ರಾಜಕುಮಾರ ಪಾಟೀಲ ತೆಲ್ಕೂರ್-ಬಿಜೆಪಿ
5) ಜೇವರ್ಗಿ- ಡಾ ಅಜಯ್ ಸಿಂಗ್-ಕಾಂಗ್ರೆಸ್
6) ಚಿತ್ತಾಪುರ- ಪ್ರಿಯಾಂಕ್ ಖರ್ಗೆ-ಕಾಂಗ್ರೆಸ್
7) ಅಫಜಲಪುರ- ಎಮ್ ವಾಯ್ ಪಾಟೀಲ-ಕಾಂಗ್ರೆಸ್
8) ಗುರುಮಠಕಲ್- ನಾಗನಗೌಡ ಕಂದಕುರ-ಜೆಡಿಎಸ್
ಜಾತಿ ಸಮೀಕರಣ
(ಅಂದಾಜು ಜಾತಿವಾರು ಮತದಾರರು, ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡವರು ಸೇರಿ): 20,12000.
ಲಿಂಗಾಯತ- 600000, ಬ್ರಾಹ್ಮಣ-60000, ಮರಾಠಾ-20000, ಜೈನ-10000, ದಲಿತ-350000, ಕುರುಬ-19000, ಬಂಜಾರಾ-200000, ಮಾದಿಗ-150000, ಕೋಲಿ-210000, ರೆಡ್ಡಿ-17000, ಭೋವಿ-33000, ಈಡಿಗ-32000, ಇತರೆ-11000, ಮುಸ್ಲಿಂ-300000.