ಕಲಬುರಗಿ: ಹಿಂದುಳಿದ ವರ್ಗದ ಜನರು ಕಾಂಗ್ರೆಸ್ ಪರವಾಗಿಲ್ಲ, ಈಗ ಅವರು ಜಾಗೃತರಾಗಿದ್ದಾರೆ. ಬಿಜೆಪಿ ಪರವಾಗಿ ವಿಜಯದ ಪತಾಕಿ ಹಾರಿಸಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್ ನಾಯಕರಿಗೆ ತಾಕತ್ತಿದ್ದರೆ ತಡೆಯಲಿ ನೋಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದರು.
ನಗರದಲ್ಲಿಂದು ನಡೆದ ಬೃಹತ್ ಬಿಜೆಪಿ ಒಬಿಸಿ ಸಮಾವೇಶದಲ್ಲಿ ಪಾಲ್ಗೊಂಡು ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದುಳಿದ ಜನರು ಈಗ ಬಿಜೆಪಿ ಪರವಾಗಿ ನಿಂತಿದ್ದಾರೆ. ಕಾಂಗ್ರೆಸ್ನವರಿಗೆ ತಾಕತ್ತಿದ್ದರೆ ನಮ್ಮ ವಿಜಯ ಪತಾಕೆ ನಿಲ್ಲಿಸುವ ಕೆಲಸ ಮಾಡಿ ಎಂದು ವೇದಿಕೆ ಮುಖಾಂತರ ಕಾಂಗ್ರೆಸ್ ನಾಯಕರಿಗೆ ಸಿಎಂ ಸವಾಲು ಎಸೆದರು.
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಬೊಮ್ಮಾಯಿ, ಅಹಿಂದ ಹೆಸರಿನಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಅಹಿಂದ ಏಳಿಗೆ ಮಾಡದೇ ದ್ರೋಹ ಬಗೆದಿದ್ದಾರೆ. ಹಿಂದುಳಿದ ವರ್ಗಕ್ಕೆ ಸ್ಥಾನಮಾನ, ನ್ಯಾಯ ಕೊಡುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಕನಿಷ್ಠ ಪಕ್ಷ ಕುರುಬ ಸಮಾಜಕ್ಕೆ ಸಂಪುಟದಲ್ಲಿ ಒಂದು ಸಚಿವ ಸ್ಥಾನ ಕೂಡ ಕೊಡಲಿಲ್ಲ, ಕರ್ನಾಟಕದಲ್ಲಿ ಬದಲಾವಣೆಯ ಕಾಲ ಬಂದಿದೆ. ಆಡಳಿತದಲ್ಲಿ ಬದಲಾವಣೆಯಲ್ಲ, ಬದಲಾಗಿ ಸಿದ್ದರಾಮಯ್ಯನವರನ್ನು ಮನೆಗೆ ಕಳುಹಿಸುವ ಕಾಲ ಬಂದಿದೆ ಎಂದರು.
ಇದನ್ನೂ ಓದಿ: ಪ್ರತಿ ಗ್ರಾಮದ 2 ಸ್ತ್ರೀ ಶಕ್ತಿ ಸಂಘಗಳಿಗೆ ತಲಾ 5 ಲಕ್ಷ ರೂ ಸಾಲ ಸೌಲಭ್ಯ: ಸಿಎಂ ಬೊಮ್ಮಾಯಿ
ಪಕ್ಕದ ಮನೆಯವರು ಗಂಡು ಹಡೆದರೆ ಇವನು ಊರು ತುಂಬಾ ಸಿಹಿ ಹಂಚಿದನಂತೆ ಎಂಬಂತೆ ಕಾಂಗ್ರೆಸ್ ನಡವಳಿಕೆ ಇದೆ. ಹಿಂದುಳಿದ ಜನಾಂಗಕ್ಕೆ ಮೀಸಲಾತಿ ಹೆಚ್ಚಳ, ಸೂಕ್ತ ಸ್ಥಾನಮಾನ ನಾವು ನೀಡಿದ್ದೇವೆ. ಅದನ್ನು ನಾವು ಮಾಡಿದ ಸಾಧನೆ ಎಂಬಂತೆ ಕಾಂಗ್ರೆಸ್ ನಾಯಕರು ಹೇಳಿಕೊಂಡು ತಿರುಗುತ್ತಿದ್ದಾರೆ. ನಾವು ಕುರಿಗಾಹಿಗಳಿಗೆ 354 ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದೇವೆ. ಸಿದ್ದರಾಮಯ್ಯಗೆ ಯಾಕೆ ಇಂತಹ ಮನಸ್ಸು ಬರಲಿಲ್ಲ. ಕಾಂಗ್ರೆಸ್ ನಾಯಕರಿಗೆ ಸಾಮಾಜಿಕ ನ್ಯಾಯ ಅನ್ನೋದು ಕೇವಲ ಭಾಷಣಕ್ಕೆ ಸರಕಾದಂತಾಗಿದೆ. ಇಂತಹವರನ್ನು ದೂರವಿಟ್ಟು ಕರ್ನಾಟಕದಲ್ಲಿ ಮತ್ತೆ ಜನಪರ ಬಿಜೆಪಿ ಸರ್ಕಾರ ತರುವ ಕೆಲಸ ಮಾಡಿ ಎಂದು ಮನವಿ ಮಾಡಿದರು.