ಕಲಬುರಗಿ: ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರನ್ನು ಶುಕ್ರವಾರ ಸಂಜೆ ಮಾಡಬೂಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಮೂರು ದಿನಗಳಲ್ಲಿ ಎರಡನೇ ಬಾರಿಗೆ ಮಣಿಕಂಠ ರಾಠೋಡ ಬಂಧನಕ್ಕೆ ಒಳಗಾಗಿದ್ದು, 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ (ಆ. 23) ಬೆಳ್ಳಂಬೆಳಗ್ಗೆ ಕಲಬುರಗಿಯ ಗಂಜ್ ಪ್ರದೇಶದ ಭಾರತ್ ಪ್ರೈಡ್ ಅಪಾರ್ಟ್ಮೆಂಟ್ನಲ್ಲಿರುವ ಮಣಿಕಂಠ ರಾಠೋಡ್ ಮನೆಯಿಂದ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಬುಧವಾರ ಸಂಜೆಯೇ ಠಾಣೆ ಜಾಮೀನಿನ ಅಡಿ ಬಿಡುಗಡೆ ಮಾಡಲಾಗಿತ್ತು. ಇದೀಗ ಶುಕ್ರವಾರ ಸಾಯಂಕಾಲ ಮತ್ತೆ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಲಗುರ್ತಿ ಗ್ರಾಮದ ಯುವಕ ದೇವಾನಂದ ಕೊರಬಾ ಎಂಬಾತನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 23ರಂದು ಚಿತ್ತಾಪುರದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಈ ವಿಚಾರದ ಬಗ್ಗೆ ಮಣಿಕಂಠ ರಾಠೋಡ್ ತಾವು ಮಾತನಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಮಣಿಕಂಠ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬುಧವಾರ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಠಾಣೆ ಜಾಮೀನಿನಡಿ ಬಿಡುಗಡೆ ಮಾಡಲಾಗಿತ್ತು.
ಬಿಡುಗಡೆ ಬೆನ್ನಲ್ಲೇ ಕಲಬುರಗಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ರಾಠೋಡ್, ತಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನಡೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಮುಂದುವರೆದು ಮಾತನಾಡಿದ್ದ ರಾಠೋಡ್, ಕಲಬುರಗಿಯಲ್ಲಿ ಲಾ ಅಂಡ್ ಆರ್ಡರ್ ಹದಗೆಟ್ಟಿದೆ. ನಮ್ಮ ಮೇಲೆ ಒಂದು ದೂರು ದಾಖಲಾದರೆ ತಕ್ಷಣ ಎಫ್‌ಐಆರ್ ಮಾಡಿ ಅರೆಸ್ಟ್ ಮಾಡುತ್ತಾರೆ. ಆದರೆ, ನಾವು ದಾಖಲಿಸುವ ದೂರುಗಳಿಗೆ ಸ್ಪಂದಿಸುವುದಿಲ್ಲ ಎಂದು ಆರೋಪಿಸಿದ್ದರು. ಪ್ರಿಯಾಂಕ್ ಖರ್ಗೆ ಅವರನ್ನು ಸಂಪುಟದಿಂದ ಹೊರಗಿಡಲಿ ಅಥವಾ ಕಲಬುರಗಿ ಉಸ್ತುವಾರಿ ಸಚಿವ ಸ್ಥಾನದಿಂದ ಬೇರಡೆ ವರ್ಗಾಯಿಸಲಿ ಎಂದು ಮಣಿಕಂಠ ರಾಠೋಡ ಆಗ್ರಹಿಸಿದ್ದರು.
ಜಾಮೀನಿನ ಷರತ್ತು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಮತ್ತೆ ಮಣಿಕಂಠ ರಾಠೋಡ್ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧನ ಖಂಡಿಸಿ ಚಿತ್ತಾಪುರ ಹಾಗೂ ಕಲಬುರಗಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಕಲಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬಂಧಿಸಿದ ಪೊಲೀಸರು