ಸೇಡಂ: ಪಟ್ಟಣದ ವ್ಯಾಪಾರಿ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮುತ್ಯಾಲ ಕೊಲೆ ಪ್ರಕರಣ ಭೇದಿಸಿದ ಜಿಲ್ಲೆಯ ಪೊಲೀಸರು, ಸುಪಾರಿ ನೀಡಿದ ವ್ಯಕ್ತಿ ಸೇರಿ ನಾಲ್ವರನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.
ಸೇಡಂ ಪಟ್ಟಣದ ನಿವಾಸಿಗಳಾದ ಅವಿನಾಶ್ ರಾಥೋಡ್, ಕರಣ ಅಲಿಯಾಸ್ ಪಿತಲ ರಾಠೋಡ, ವಿಜಯಕುಮಾರ ಯಾಕಾಪುರ ಹಾಗೂ ಕೊಲೆಗೆ ಸುಪಾರಿ ನೀಡಿದ್ದ ಲಿಂಗರಾಜ ಮಾದೇವನವರ ಬಂಧಿತ ಆರೋಪಿಗಳು ಎಂದು ಎಸ್ಪಿ ಈಶಾ ಪಂತ್ ತಿಳಿಸಿದ್ದಾರೆ.
ಇದೇ ನವೆಂಬರ್ 14 ರಂದು ಮಧ್ಯರಾತ್ರಿ ಮಲ್ಲಿಕಾರ್ಜುನ ಮುತ್ಯಾಲ ತಮ್ಮ ಅಂಗಡಿಯಲ್ಲಿ ಮಲಗಿದ್ದಾಗ ಅವರ ಮೇಲೆ ದಾಳಿ ನಡೆಸಿದ ಆರೋಪಿಗಳು ಮರ್ಮಾಂಗಕ್ಕೆ ಹೊಡೆದು, ಉಸಿರು ಗಟ್ಟಿಸಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ಇನ್ನು ಆಸ್ತಿ ವಿಚಾರವಾಗಿ ಕೊಲೆ ನಡೆದಿದೆ ಎಂಬುದು ತನಿಖೆ ವೇಳೆ ಬಯಲಾಗಿದೆ. ಮೃತ ಮಲ್ಲಿಕಾರ್ಜುನ ಅವರ ಪುತ್ರ ಹಾಗೂ ಕೊಲೆಗೆ ಸುಪಾರಿ ನೀಡಿದ ಲಿಂಗರಾಜನ ಸಹೋದರಿ, ಇಬ್ಬರೂ ಪರಸ್ಪರ ಪ್ರೀತಿಸಿ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಮಗಳು ಅಂತರ್ಜಾತಿ ವಿವಾಹ ಆಗಿದ್ದಾಳೆ ಎಂಬ ನೋವಿನಲ್ಲಿ ಲಿಂಗರಾಜನ ಕುಟುಂಬ ಇತ್ತು.
ಲಿಂಗರಾಜ ಕುಟುಂಬ ಶ್ರೀಮಂತ ಕುಟುಂಬವಾಗಿದೆ. ಈ ಮಧ್ಯೆ ಸೊಸೆ ಮುಂದೆ ಬಿಟ್ಟು ಅರ್ಧ ಆಸ್ತಿ ತರೋದಕ್ಕೆ ಮಲ್ಲಿಕಾರ್ಜುನ ಪ್ಲಾನ್ ರೂಪಿಸಿದ್ದರಂತೆ. ಈ ವಿಷಯ ತಿಳಿದ ಲಿಂಗರಾಜ ಹತ್ತು ಲಕ್ಷಕ್ಕೆ ಮಲ್ಲಿಕಾರ್ಜುನ ಮುತ್ಯಾಲ ಕೊಲೆಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ.
ಕೊಲೆ ಮಾಡಿದ ಆರೋಪಿಗಳಿಗೆ ಹತ್ತು ಲಕ್ಷ ಸುಪಾರಿ ಹಣದಲ್ಲಿ ಅರ್ಧ ಹಣ ನೀಡಿದ್ದ ಲಿಂಗರಾಜ. ಇದರಲ್ಲಿ ಆರೋಪಿಗಳು ಒಂದು ಲಕ್ಷ ರೂಪಾಯಿ ಬಳಕೆ ಮಾಡಿದ್ದು, ಇನ್ನುಳಿದ ನಾಲ್ಕು ಲಕ್ಷ ರೂಪಾಯಿಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಕುರಿತು ಸೇಡಂ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅತ್ತೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ ಆರೋಪ: ವ್ಯಕ್ತಿ ಕೊಲೆ ಮಾಡಿದ ಅಳಿಯ