ಕಲಬುರಗಿ: ಕಾಂಗ್ರೆಸ್ ಪಕ್ಷದವರು ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾತಾಡುತ್ತಿದ್ದಾರೆ ಎಂದು ಮಾಜಿ ಸಚಿವ ಶರಣಪ್ರಕಾಶ ಪಾಟೀಲ್‌ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿರುಗೇಟು ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜೋಕರ್ ಎಂದ ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿಕೆಯನ್ನು ಅವರು ಖಂಡಿಸಿದರು.
ಇಂತಹ ಮಾತುಗಳು ಬರೋದು ಅಸ್ತಿತ್ವ ಕಳೆದುಕೊಂಡಾಗ. ಇದೇ ರೀತಿ ಮಾತನಾಡುತ್ತಾ ಇದ್ರೆ, ಇರೋ ಕಾಂಗ್ರೆಸ್ ಬೇರುಗಳನ್ನು ಕಳೆದುಕೊಳ್ಳುತ್ತಾರೆ. ಕಾಂಗ್ರೆಸ್ಗೆ ಜೆಡಿಎಸ್ ಸಪೋರ್ಟ್ ಮಾಡಲ್ಲ. ಬಿಜೆಪಿ ಮೇಯರ್ ಗದ್ದುಗೆ ಹಿಡಿದ ಮೇಲೆ ಕಾಂಗ್ರೆಸ್‌ನವರು ಮತ್ತಷ್ಟು ಸ್ಥಿಮಿತ ಕಳೆದುಕೊಳ್ಳುತ್ತಾರೆ ಎಂದರು.
'ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿ ಕಲಿಯಲಿ'
ಪ್ರಿಯಾಂಕ ಖರ್ಗೆ, ಶರಣಪ್ರಕಾಶ ಪಾಟೀಲ್ ಅವರು ಲೂಸ್ ಟಾಕ್ ಮಾಡುತ್ತಿದ್ದಾರೆ. ಇವರ ಈ ರೀತಿಯ ಹೇಳಿಕೆಗಳಿಂದ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ. ನಳೀನ್ ಕುಮಾರ್ ಕಟೀಲ್, ಮೋದಿ ಅವರ ಬಗ್ಗೆ ಈ ರೀತಿ ಮಾತಾಡಿದ್ರೆ ಜನರು ಪಾಠ ಕಲಿಸುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿ ಶರಣಪ್ರಕಾಶ ಪಾಟೀಲ್ ಕಲಿಯಬೇಕು ಎಂದರು.
ಇವರು ಮಾತಾಡಿದ್ದು ನೋಡಿದ್ರೆ ಅಸಹ್ಯ ಎನಿಸುತ್ತದೆ. ಕಲಬುರಗಿಯಲ್ಲಿ ಕಾಂಗ್ರೆಸ್ ಕಳಚಿ ಬಿಳೋದಕ್ಕೆ ಕಾರಣ ಪ್ರಿಯಾಂಕ್ ಖರ್ಗೆ ಮತ್ತು ಶರಣಪ್ರಕಾಶ ಪಾಟೀಲ್. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವರು ಮಾತಾಡ್ತಿದ್ದಾರೆ. ಮೋದಿ ಅವರ ಗುಣದ ಮುಂದೆ ಪ್ರಿಯಾಂಕ್ ಖರ್ಗೆ ಗುಲಗಂಜಿಯೂ ಅಲ್ಲ ಎಂದು ಕಿಡಿಕಾರಿದರು.
ಆಪರೇಷನ್ ಕಮಲದ ಸುಳಿವು ಕೊಟ್ಟರಾ ರವಿಕುಮಾರ್?
ನಾವು 23 ಸ್ಥಾನಗಳನ್ನು ಗೆದ್ದಿದ್ದೇವೆ. ಮೇಯರ್ ಸ್ಥಾನ ಬಿಟ್ಟುಕೊಡೋದು ಕಷ್ಟ. ಉಳಿದ ಸ್ಥಾನಗಳ ಬಗ್ಗೆ ಮಾತುಕತೆ ಮಾಡುತ್ತೇವೆ. ರಾಜಕಾರಣದಲ್ಲಿ ಎಲ್ಲಾ ಸಾಧ್ಯತೆಗಳಿವೆ ಎಂದರು.
ಇದನ್ನೂ ಓದಿ: ಬಿಜೆಪಿ ತಿರುಕನ ಕನಸು ಕಾಣುತ್ತಿದೆ, ಅಧಿಕಾರಕ್ಕೆ ಬರಲು ವಾಮಮಾರ್ಗ ಹುಡುಕುತ್ತಿದೆ: ಶರಣಪ್ರಕಾಶ ಪಾಟೀಲ್