ಕಲಬುರಗಿ: ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆ ಮತದಾನೋತ್ತರ ಸಮೀಕ್ಷೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಎಐಸಿಸಿ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಇವಿಎಂ ಯಂತ್ರಗಳನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ ಎಂದು ಆರೋಪಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಎಲ್ಲ ಕ್ಷೇತ್ರಗಳಲ್ಲಿ ಇವಿಎಂ ಯಂತ್ರಗಳ ದುರ್ಬಳಕೆಯಾಗುತ್ತಿದೆ ಎಂದು ಹೇಳಲ್ಲ. ಆದರೆ ಸೆಲೆಕ್ಟಿವ್ ಆಗಿ ಕೆಲ ಕ್ಷೇತ್ರಗಳಲ್ಲಿ ಇವಿಎಂ ಯಂತ್ರಗಳ ದುರ್ಬಳಕೆ ಮಾಡಿಕೊಳ್ಳಲಾಗಿದೆ.
ಎಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಅಗತ್ಯವಿದೆಯೋ ಅಂತಹ ಕಡೆ ಇವಿಎಂ ಯಂತ್ರಗಳ ದುರ್ಬಳಕೆಯಾಗಿದೆ. ಸೋತಾಗ ಹೇಳಿದರೆ ಸೋತ ಕಾರಣಕ್ಕೆ ಹೇಳ್ತಾರೆ ಅಂತಾರೆ. ಆದ್ರೆ ಈ ಮುಂಚಿನಿಂದಲೂ ನಾವು ಇವಿಎಂಗಳ ದುರ್ಬಳಕೆ ಬಗ್ಗೆ ಹೇಳುತ್ತಲೇ ಬಂದಿದ್ದೇವೆ. ವಿರೋಧ ಪಕ್ಷಗಳು ಚುನವಣಾ ಆಯೋಗಕ್ಕೂ ಮನವಿ ಮಾಡಿವೆ. ಆದರೂ ಆಯೋಗ ಇದನ್ನು ಒಪ್ಪುತ್ತಿಲ್ಲ.
ಭಾರತವನ್ನು ಹೊರತುಪಡಿಸಿ ಇಡೀ ಜಗತ್ತೆ ಇವಿಎಂ ಕೈಬಿಟ್ಟು ಬ್ಯಾಲೆಟ್ ಪೇಪರ್ ಮೊರೆ ಹೋಗಿದೆ. ಅಮೆರಿಕದಂತಹ ದೊಡ್ಡ ದೇಶವೇ ಮತಪತ್ರ ಬಳಸುತ್ತಿದೆ. ಭಾರತದಲ್ಲಿ 110 ಕೋಟಿ ಜನಸಂಖ್ಯೆ ಇದ್ದಾಗ ಮತ ಪತ್ರ ಬಳಸಲಾಗುತ್ತಿತ್ತು. ಈಗ ಇರೋ 130 ಕೋಟಿ ಜನಸಂಖ್ಯೆಗೆ ಮತಪತ್ರ ಬಳಸಲು ದೊಡ್ಡ ತೊಂದರೆಯೇನೂ ಇಲ್ಲ. ಚುನಾವಣಾ ಆಯೋಗ ಮತಪತ್ರ ಬಳಸಲು ಮುಂದಾಗುತ್ತಿಲ್ಲ. ಅದನ್ನೇ ಬಿಜೆಪಿ ಬಂಡವಾಳ ಮಾಡಿಕೊಂಡು, ಅಧಿಕಾರದ ಗದ್ದುಗೆ ಏರುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಸ್ವತಃ ಯಡಿಯೂರಪ್ಪ ಅವರೇ ಅನುದಾನ ಹಂಚಿಕೆಯಲ್ಲಾದ ತಾರತಮ್ಯವನ್ನು ಸದನದಲ್ಲಿ ಒಪ್ಪಿಕೊಳ್ಳೋ ಜೊತೆಗೆ ಅದನ್ನು ಸರಿಪಡಿಸೋದಾಗಿ ಭರವಸೆ ನೀಡಿದ್ದರು. ಆದರೆ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಈ ಹಿಂದೆ ನಿಗದಿಯಾಗಿದ್ದ ಹಣವನ್ನೂ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಡೈವರ್ಟ್ ಮಾಡಲಾಗುತ್ತಿದೆ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡೋದು ಯಾರಿಗೂ ಶೋಭೆ ತರಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಖರ್ಗೆ ಕಿಡಿಕಾರಿದರು.
ರಾಜ್ಯ ಸರ್ಕಾರ ಕೊಡೋ ಅನುದಾನ ಯಾವುದೋ ವ್ಯಕ್ತಿ ಅಥವಾ ಪಕ್ಷಕ್ಕೆ ಹೋಗಲ್ಲ. ಆಯಾ ಕ್ಷೇತ್ರದ ಜನತೆಯ ಅಭಿವೃದ್ಧಿಗೆ ನೆರವಾಗುತ್ತದೆ. ರಸ್ತೆ, ಕುಡಿಯುವ ನೀರು ಇತ್ಯಾದಿ ಸಾರ್ವಜನಿಕರಿಗೆ ಉಪಯೋಗವಾಗೋ ಕೆಲಸಗಳು. ಯಾವ ಶಾಸಕರಿಗೆ ಎಷ್ಟು ಅನುದಾನ ಕೊಡಬೇಕೊ ಅದನ್ನು ಕೊಡಬೇಕು. ಅದನ್ನು ಬಿಟ್ಟು ಈ ಹಿಂದೆ ನಿಗದಿಯಾದ ಹಣವನ್ನೂ ವಾಪಸ್ ಪಡೆಯೋದು, ಕಾಂಗ್ರೆಸ್, ಬಿಜೆಪಿ ಶಾಸಕರೆಂದು ತಾರತಮ್ಯ ಮಾಡೋದು ಸರಿಯಲ್ಲ. ಅಭಿವೃದ್ಧಿ ವಿಷಯದಲ್ಲಿ ಪಾಲಿಟಿಕ್ಸ್ ಮಾಡೋದನ್ನು ಬಿಡಬೇಕು. ತಾರತಮ್ಯ ಸರಿಪಡಿಸೋದಾಗಿ ಹೇಳಿರೋ ಸಿಎಂ ನುಡಿದಂತೆ ನಡೆಯಬೇಕೆಂದು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.