ಕಲಬುರಗಿ: ಜಿಲ್ಲೆಯಲ್ಲಿ ಮಳೆಯ ಅಭಾವ ಇದ್ದರೂ ಕೂಡ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೀಮಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ಜಿಲ್ಲೆಯ ಅಫಜಲಪೂರ, ಜೇವರ್ಗಿ, ಚಿತ್ತಾಪುರ ತಾಲೂಕಿನಲ್ಲಿ ಹರಿಯುವ ಭೀಮಾ ನದಿಯಿಂದ ಪ್ರವಾಹ ಭೀತಿ ಎದುರಾಗಿದೆ. ಅಫಜಲಪುರದ ಸೊನ್ ಸೇತುವೆ, ಘತ್ತರಗಾ ಸೇತುವೆ, ಗಾಣಗಾಪುರ ಸೇತುವೆ ತುಂಬಿ ಹರಿಯುತ್ತಿವೆ.
ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಪ್ರತಿನಿತ್ಯ 1.25 ಕ್ಯೂಸೆಕ್, ವೀರಾ ಜಲಾಶಯದಿಂದ 0.75 ಕ್ಯೂಸೆಕ್ ನೀರು ಸೇರಿ ದಿನಕ್ಕೆ 2.25 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಇದು ಭೀಮಾ ನದಿ ಪಾತ್ರದ ಗ್ರಾಮಗಳಿಗೆ ತೀವ್ರ ಆತಂಕ ಉಂಟು ಮಾಡಿದೆ.
ಈಗಾಗಲೇ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಪ್ರವಾಹ ಭೀತಿ ಎದುರಾಗುವ ಪ್ರದೇಶದಿಂದ ಜನ-ಜಾನುವಾರಗಳನ್ನು ಸ್ಥಳಾಂತರಿಸಲು ಸೂಚಿಸಲಾಗಿದೆ. ಇನ್ನು ಅಫಜಲಪೂರ ಗ್ರಾಮದ ಹಲವೆಡೆ ನೀರು ಹೊಲಗಳಿಗೆ ನುಗ್ಗಿದ ಪರಿಣಾಮ ಬೆಳೆ ಸಂಪೂರ್ಣ ಹಾನಿಯಾಗಿದೆ.
ಜೇವರ್ಗಿ ತಾಲೂಕಿನ ನೆಲೋಗಿ ಮತ್ತು ಚಿನ್ನಮಳ್ಳಿ ಎರಡು ಗ್ರಾಮಗಳ ಮಧ್ಯೆ ಸಂಪರ್ಕಕ್ಕಾಗಿ ನಿರ್ಮಿಸಿದ್ದ ಕಲ್ಲೂರ ಸೇತುವೆ (ನಾಗರಣಿ ಬ್ರಿಡ್ಜ್ ಕಂ ಬ್ಯಾರೇಜ್) ಮಣ್ಣಿನ ಕಾಲು ಸೇತುವೆ ನೀರಿನ ರಭಸಕ್ಕೆ ಕುಸಿದು ಹೋಗಿದೆ. ವಿಜಯಪುರ ಸೇತುವೆಯೂ ಜಲಾವೃತಗೊಂಡಿದ್ದು, ಜೇವರ್ಗಿ-ವಿಜಯಪುರ ರಸ್ತೆ ಸಂಪರ್ಕ ತಾತ್ಕಾಲಿಕ ಕಡಿತವಾಗಿದೆ. ಮಣ್ಣೂರು ಭೀಮಾ ನದಿ ಮಧ್ಯದಲ್ಲಿರುವ ಯಲ್ಲಮ್ಮ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ. ಭಕ್ತರು ದರ್ಶನಕ್ಕೆ ಬಾರದಂತೆ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.