ಕಲಬುರಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 5 ಟ್ರಿಲಿಯನ್ ಎಕಾನಮಿಗೆ ಬ್ಯಾಂಕ್‍ಗಳು ಕೊಡುಗೆ ನೀಡಬೇಕು. ಆ ನಿಟ್ಟಿನಲ್ಲಿ ಬ್ಯಾಂಕ್ ವ್ಯವಸ್ಥಾಪಕರು ಕಾರ್ಯನಿರ್ವಹಿಸಬೇಕು ಎಂದು ಬೀದರ್ ಲೋಕಸಭಾ ಸದಸ್ಯ ಭಗವಂತ ಖೂಬಾ ಹೇಳಿದ್ದಾರೆ.
ನಗರದ ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿ ಕರೆದಿದ್ದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ 5 ಟ್ರಿಲಿಯನ್ ಎಕಾನಮಿ ಸಾಕಾರಗೊಳ್ಳಲು ದೇಶದ ಎಲ್ಲಾ 130 ಕೋಟಿ ಜನತೆ ದುಡಿಯಬೇಕು. ಈ ಸಂಬಂಧ ರೈತರು, ಕೃಷಿಕರು, ಉದ್ದಿಮೆದಾರರನ್ನು ತೊಡಗಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಅಧಿಕಾರಿಗಳಿಂದ ಮುದ್ರಾ ಯೋಜನೆಯ ನೆರವು ನೀಡಿಕೆ ಬಗ್ಗೆ ಮಾಹಿತಿ ಪಡೆದರು. ನಿರುದ್ಯೋಗಿ ಯುವಕರನ್ನು ಸಾಲ ನೀಡಿಕೆ ಸಂಬಂಧ ಅಲೆದಾಡಿಸಬೇಡಿ, ಸಕಾಲಕ್ಕೆ ಸಾಲದ ಸೌಲಭ್ಯ ನೀಡಿ ಅವರಲ್ಲಿ ಭರವಸೆ ಬಿತ್ತಿರಿ ಎಂದು ಸಲಹೆ ನೀಡಿದರು. ಮುದ್ರಾಯೋಜನೆಯಲ್ಲಿ ಇದುವರೆಗೆ ಎಷ್ಟು ಸಾಲವನ್ನು ವಿತರಿಸಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಸಲ್ಲಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.