ಕಲಬುರಗಿ: ಚಿತ್ತಾಪುರದ ವಾಡಿ ಪೊಲೀಸರು ಟಿಪ್ಪರ್ ಗಾಡಿಯ ಬ್ಯಾಟರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿ, ನಾಲ್ವರು ಬ್ಯಾಟರಿ ಕಳ್ಳರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಶಹಾಬಾದ್ ಧಕ್ಕಾ ತಾಂಡಾದ ವಂದನಾ ಸಲೀಂ ಶೇಖ್, ಲಕ್ಷ್ಮಿ ಕಾಂಬಳೆ, ಶಹಾಬಾದ್ನ ಗೌಸ್ ಬಂಗಡಿವಾಲೆ ಹಾಗು ಗೋಳಾ ಗ್ರಾಮದ ದೇವರಾಜ ಮಾವನೂರ ಎಂದು ಗುರುತಿಸಲಾಗಿದೆ. ಬಂಧಿತರಿಂದ 36 ಸಾವಿರ ರೂಪಾಯಿ ಮೌಲ್ಯದ ಆರು ಬ್ಯಾಟರಿಗಳನ್ನು ವಶಕ್ಕೆ ಪಡೆಯಲಾಗಿದೆ.
ವಾಡಿಯ ಬಿರ್ಲಾ ಏರಿಯಾದಲ್ಲಿ ನಿಲ್ಲಿಸಿದ್ದ ಶೇಖ್ ಮೆಹಬೂಬ್ ಎಂಬುವರಿಗೆ ಸೇರಿದ ಟಿಪ್ಪರ್ನಲ್ಲಿದ್ದ ಬ್ಯಾಟರಿಗಳನ್ನು ಕದ್ದು ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದರು.
ಈ ವೇಳೆ ಕಳ್ಳತನ ನಡೆದ ಸ್ಥಳದಲ್ಲಿ ಸಿಕ್ಕ ಗಾಜಿನ ಬಳೆ ಚೂರಿನ ಕುರುಹು ಬೆನ್ನಟ್ಟಿದ ಪೊಲೀಸರು ಕೇವಲ 14 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಎರಡು ಆಟೋಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಒಟ್ಟು 2.86 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.