ಕಲಬುರಗಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿರುವುದರಿಂದಲೇ ಸಮಿಶ್ರ ಸರಕಾರದಲ್ಲಿ ಭಿನ್ನಾಭಿಪ್ರಾಯಗಳು ಮನೆ ಮಾಡಲು ಕಾರಣ ಎಂದು ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ.
ಕಲ್ಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳೇ ಇದಕ್ಕೆ ಸಾಕ್ಷಿ. ಕಳೆದ ಚುನಾವಣೆಯಲ್ಲಿ ಸ್ವತಂತ್ರ ಜೆಡಿಎಸ್ ಅಭ್ಯರ್ಥಿಗಳಿಗೆ ಇರುವ ಗೌರವ ಕಾಂಗ್ರೆಸ್ ಶಾಸಕರಿಗಿಲ್ಲ. ಇದರಿಂದ ಹಲವಾರು ಜನ ಅತೃಪ್ತಗೊಂಡಿದ್ದಾರೆ. ನಾವಾಗಿಯೇ ಸಮ್ಮಿಶ್ರ ಸರಕಾರವನ್ನು ಕೆಡುವಲು ಹೋಗೋದಿಲ್ಲ. ಆದರೆ, ಅದಾಗಿಯೇ ಉರುಳಿ ಬಿದ್ದರೆ ಸರ್ಕಾರ ರಚಿಸಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಯತ್ನಾಳ್ ತಿಳಿಸಿದ್ದಾರೆ.
ನಾನೂ ಸಹ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದೇನೆ. ಉತ್ತರಕರ್ನಾಟಕ ಬಿಜೆಪಿಯ ಭದ್ರಕೋಟೆ. ಬಿಜೆಪಿಗೆ ಉತ್ತರಕರ್ನಾಟಕ ಜನರ ಬೆಂಬಲ ಎಂದೆಂದಿಗೂ ಇದೆ. ಹೀಗಾಗಿ ಉತ್ತರಕರ್ನಾಟಕದವರನ್ನೇ ಬಿಜೆಪಿಯ ರಾಜ್ಯಾಧ್ಯಕ್ಷನನ್ನಾಗಿಸುತ್ತಾರೆ ಎಂಬ ವಿಶ್ವಾಸವಿದೆ. ಹೈಕಮಾಂಡ್ ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಯತ್ನಾಳ್ ಹೇಳಿದರು.