ಸೇಡಂ: ಶ್ರಾವಣ ಮಾಸದ ಮೂರನೇ ಶನಿವಾರ ತಾಲೂಕಿನ ಐತಿಹಾಸಿಕ ಮೋತಕಪಲ್ಲಿಯ ಬಲಭೀಮಸೇನ ದೇವಾಲಯಕ್ಕೆ ಭಕ್ತಸಾಗರ ಹರಿದು ಬಂದಿದೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ದೇವಾಲಯ ಬಂದ್ ಮಾಡಿದ ಪ್ರಯುಕ್ತ ಸಾವಿರಾರು ಭಕ್ತರು ನಿರಾಶೆಯಲ್ಲಿ ಹಿಂದಿರುಗಿದ್ದಾರೆ.
ಪ್ರಚಾರದ ಕೊರತೆಯಿಂದಾಗಿ ಜನರಿಗೆ ದೇವಾಲಯ ಬಂದ್ ಮಾಡಿರುವ ಕುರಿತು ಮಾಹಿತಿ ದೊರೆಯದ ಪ್ರಯುಕ್ತ ಶನಿವಾರ ದೇವಾಲಯದ ಮುಂದೆ ಸಾವಿರಾರು ಜನ ಭಕ್ತರ ದಂಡು ಕಂಡುಬಂತು. ಕೆಲವರು ದೇವಾಲಯ ತೆರೆಯಲಿದೆ ಎಂದು ಕುಳಿತರೆ, ಮತ್ತೆ ಕೆಲವರು ತೆಂಗಿನ ಕಾಯಿ, ಪೂಜಾ ಸಾಮಗ್ರಿಗಳ ಹುಡುಕಾಟದಲ್ಲಿ ತೊಡಗಿದ್ದರು. ಬಹುತೇಕ ಅಂಗಡಿಗಳು ಸಹ ಮುಚ್ಚಲ್ಪಟ್ಟಿದ್ದವು. ತೆಲಂಗಾಣ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರಿಗೆ ದೇವರ ದರ್ಶನ ಭಾಗ್ಯ ದೊರೆಯದೆ ನಿರಾಸೆಯಿಂದ ಹಿಂದಿರುಗಿದರು.
ಕೊರೊನಾ ಮಹಾಮಾರಿ ವ್ಯಾಪಿಸುವಿಕೆ ಹಿನ್ನೆಲೆಯಲ್ಲಿ ಮೋತಕಪಲ್ಲಿ ಶ್ರೀ ಬಲಭೀಮಸೇನ ದೇವಾಲಯವನ್ನು ಪ್ರತಿ ಶನಿವಾರದಂದು ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಭಕ್ತರು ಸಹ ಸಹಕರಿಸಬೇಕು ಎಂದು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಕೋರಿದ್ದಾರೆ.