ಕಲಬುರಗಿ: ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಸಚಿವರ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ ಎಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಮಂಗಳವಾರ ಸಂಚಲನ ಸೃಷ್ಟಿಸಿತ್ತು. ಈ ಕುರಿತು ಬಿ.ಆರ್.ಪಾಟೀಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ಬಾರಿ ನಾನು ಶಾಸಕನಾಗಿದ್ದ ಸಂದರ್ಭದ ಲೆಟರ್‌ಹೆಡ್ ಮಾದರಿ ಬಳಸಿಕೊಂಡು ದುರುದ್ದೇಶದಿಂದ ಈ ರೀತಿ ಮಾಡಿದ್ದಾರೆ. ನಕಲಿ ಲೆಟರ್ ಸೃಷ್ಟಿಸಿ ಅನಗತ್ಯ ಗೊಂದಲ ಉಂಟುಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಲಬುರಗಿ ಎಸ್ಪಿ ಈಶಾ ಪಂತ್ ಅವರಿಗೆ ದೂರು ಸಲ್ಲಿಸಿದ್ದಾರೆ. ಇದೇ ವೇಳೆ, ಇದು ಸಚಿವ ಪ್ರಿಯಾಂಕ್ ಖರ್ಗೆ ಮತ್ತು ನನ್ನ ನಡುವೆ ದ್ವೇಷ ಉಂಟು ಮಾಡುವ ಕೃತ್ಯ ಎಂದು ತಿಳಿಸಿದ್ದಾರೆ.
ಪತ್ರದಲ್ಲೇನಿತ್ತು? : ಜಿಲ್ಲಾ ಉಸ್ತುವಾರಿ ಸಚಿವರ ಅಸಹಕಾರ ಹಾಗೂ ಇಲಾಖೆಗೆ ಸಂಬಂಧಿಸಿದ ಅನುದಾನ ಬೇಡಿಕೆಯನ್ನು ನಿರ್ಲಕ್ಷಿಸಲಾಗುತ್ತಿದೆ. ನಾವು ಜನರ ಪ್ರೀತಿ, ವಿಶ್ವಾಸದಿಂದ ಗೆದ್ದು ಶಾಸಕರಾಗಿದ್ದೇವೆ. ಆದರೆ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಾಗುತ್ತಿಲ್ಲ. ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 20ಕ್ಕೂ ಹೆಚ್ಚು ಸಚಿವರು ನಮ್ಮ ಕ್ಷೇತ್ರಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಅನುದಾನ ಬಿಡುಗಡೆ ಮಾಡಲು ಸಚಿವರು ಮೂರನೇ ವ್ಯಕ್ತಿಯಿಂದ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಸ್ಥಳೀಯ ಶಾಸಕರು ನಾವಾಗಿದ್ದರೂ ಮೂರನೇ ವ್ಯಕ್ತಿಯ ಮೊರೆ ಹೋಗಬೇಕಾಗಿರುವುದು ಅತ್ಯಂತ ಬೇಸರ ತರಿಸಿದೆ. ಸಚಿವರು ತಮಗೆ ಬೇಕಾದ ಅಧಿಕಾರಿಗಳಿಗೆ ಮಣೆ ಹಾಕಿ ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ನಮ್ಮ ಯಾವುದೇ ವರ್ಗಾವಣೆ ಶಿಫಾರಸು ಪತ್ರಗಳಿಗೆ ಮಾನ್ಯತೆ ಕೊಡುತ್ತಿಲ್ಲ. ಇದರಿಂದಾಗಿ ಅಧಿಕಾರಿಗಳು ನಮ್ಮ ಕೆಲಸ ಮಾಡಿಕೊಡುತ್ತಿಲ್ಲ. ನಮ್ಮ ಮಾತಿಗೆ ಬೆಲೆ ನೀಡುತ್ತಿಲ್ಲ ಎಂದು ಶಾಸಕ ಬಿ.ಆರ್.ಪಾಟೀಲ್ ಸೇರಿದಂತೆ ಹನ್ನೊಂದು ಶಾಸಕರು ಸಹಿ ಮಾಡಿದ್ದಾರೆ ಎನ್ನಲಾದ ಪತ್ರ ಹರಿದಾಡಿತ್ತು.
ಶಾಸಕ ಬಿ.ಆರ್.ಪಾಟೀಲ್ ಸ್ಪಷ್ಟನೆ: "ನಾನು ಸಿಎಂಗೆ ಪತ್ರ ಬರೆದಿರುವುದು ನಿಜ. ಆದರೆ ಅಸಮಾಧಾನ ತೋಡಿಕೊಂಡು ಬರೆದಿಲ್ಲ. ಶಾಸಕಾಂಗ ಸಭೆ ಕರೆಯುವಂತೆ ಮನವಿ ಮಾಡಿ ಪತ್ರ ಬರೆದಿದ್ದೆ. ಆ ಪತ್ರ ಬೇರೆ, ಈ ಪತ್ರ ಬೇರೆ" ಎಂದು ಶಾಸಕರು ಸ್ಪಷ್ಟನೆ ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಮತ್ತು ನನ್ನ ಮಧ್ಯೆ ದ್ವೇಷ ಸೃಷ್ಟಿಸಲು ಕೃತ್ಯ: ಪ್ರಿಯಾಂಕ್ ಖರ್ಗೆ ತಮ್ಮ ತಂದೆಗೆ ಎಷ್ಟು ಗೌರವ ಕೊಡುತ್ತಾರೋ ಅಷ್ಟೇ ಗೌರವ ನನಗೂ ಕೊಡುತ್ತಾರೆ. ಪ್ರಿಯಾಂಕ್ ಖರ್ಗೆ ಮತ್ತು ನನ್ನ ಮಧ್ಯೆ ದ್ವೇಷ ಉಂಟುಮಾಡಲು ಈ ರೀತಿ ನಕಲಿ ಪತ್ರ ಸೃಷ್ಟಿಸಿದ್ದಾರೆ. ನಕಲಿ ಲೆಟರ್‌ಹೆಡ್‌ನಲ್ಲಿ ನಾನು ವಾಸವಿದ್ದ ಶಾಂತಿನಗರದ ಹಳೆ ಮನೆಯ ವಿಳಾಸವಿದೆ. ನಾಲ್ಕು ವರ್ಷದ ಹಿಂದೆಯೇ ಆ ಮನೆ ಬಿಟ್ಟು ಅಕ್ಕಮಹಾದೇವಿ ಕಾಲೊನಿಗೆ ನಾನು ಶಿಫ್ಟ್ ಆಗಿದ್ದೇವೆ. ಈಗಿನ ನನ್ನ ಲೆಟರ್‌ಹೆಡ್‌ನಲ್ಲಿ ಅಕ್ಕಮಹಾದೇವಿ ಕಾಲೊನಿ ಮನೆಯ ವಿಳಾಸವಿದೆ ಎಂದು ತಿಳಿಸಿದ್ದಾರೆ.
ಎಸ್ಪಿಗೆ ದೂರು ಸಲ್ಲಿಕೆ: ಈ ಕುರಿತು ಮಂಗಳವಾರ ರಾತ್ರಿಯೇ ಬಿ.ಆರ್.ಪಾಟೀಲ್ ಕಲಬುರಗಿ ಎಸ್ಪಿ ಇಶಾ ಪಂತ್ ಅವರಿಗೆ ದೂರು ನೀಡಿದ್ದು, ಹಳೆಯ ಲೆಟರ್‌ಹೆಡ್‌ನಲ್ಲಿ ನನ್ನ ಸಹಿ ಪೇಸ್ಟ್ ಮಾಡಿ ಫೇಕ್ ಲೆಟರ್ ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನನ್ನ ನಡುವೆ ದ್ವೇಷ ಹುಟ್ಟಿಸಿ ಲಾಭ ಪಡೆಯುವ ಹುನ್ನಾರವಿದು ಎಂದು ಉಲ್ಲೇಖಿಸಿ ತನಿಖೆಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರ ಹಿಡಿದು 2 ತಿಂಗಳಾಗಿಲ್ಲ, ಆಗಲೇ ಸ್ವಪಕ್ಷೀಯರಿಂದ ಅಪಸ್ವರ: ಜಿ.ಟಿ ದೇವೇಗೌಡ ಟೀಕೆ