ಸೇಡಂ (ಕಲಬುರಗಿ): ಅಯೋಧ್ಯೆ ಹೆಸರು ಕೇಳಿದರೆ ಸಾಕು, ದಶಕಗಳ ಇತಿಹಾಸ ಕಣ್ಣ ಮುಂದೆ ಬರುತ್ತದೆ. ರಾಮಜನ್ಮ ಸ್ಥಳದಲ್ಲಿ ಆಗಸ್ಟ್ 5ರಂದು ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. ಈ ಸ್ಥಳದ ವಿಚಾರ ತಿಳಿಯಲೆಂದು ಇತಿಹಾಸದ ಪುಟಗಳನ್ನು ಕೆದಕಿದರೆ ಹಲವಾರು ಆಯಾಮಗಳ ಹೋರಾಟಗಳg, ಸೇವಾ ಕಾರ್ಯಗಳು ಕಂಡುಬರುತ್ತವೆ. ಇನ್ನು ಸೇಡಂ ತಾಲೂಕು ಸಹ ಅಯೋಧ್ಯೆಯ ಐತಿಹಾಸಿಕ ದಿನಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ.
1990ರಲ್ಲಿ ಕರೆ ನೀಡಲಾಗಿದ್ದ ಕರಸೇವಕರ ಸೇವೆಯಿಂದ ಹಿಡಿದು 1992ರಲ್ಲಿ ಬಾಬ್ರಿ ಮಸೀದಿಯ ಮೂರು ಗುಂಬಜಗಳು ನೆಲಸಮವಾದ ದಿನದವರೆಗೆ ಸೇಡಂನ 21 ಜನ ಶ್ರೀರಾಮ ಭಕ್ತರು ದೇವಾಲಯ ನಿರ್ಮಾಣದ ಕನಸು ಹೊತ್ತಿದ್ದರು. ಈಗ 464 ವರ್ಷಗಳಷ್ಟು ಹಳೆಯದಾದ ರಾಮನ ಜನ್ಮಸ್ಥಾನದಲ್ಲಿ ದೇವಾಲಯ ನಿರ್ಮಾಣದ ಕಾರ್ಯಕ್ಕೆ ಚಾಲನೆ ದೊರೆಯುತ್ತಿದೆ.
ಈ ವೇಳೆ ತಮ್ಮ ಸಂತೋಷವನ್ನು ಆ ರಾಮಭಕ್ತರು ಹಂಚಿಕೊಂಡಿದ್ದಾರೆ. 1990ರಲ್ಲಿ ಕರೆ ನೀಡಲಾಗಿದ್ದ ಕರಸೇವಕರ ಪೈಕಿ ಸೇಡಂನ 10 ಜನ ಸಹ ಭಾಗವಹಿಸಲು ತೆರಳಿದ್ದರು. ಈಗಿನ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಸೇಡಂ ನೇತೃತ್ವದಲ್ಲಿ ದಿವಂಗತ ರಾಮಲು ಮೆಕ್ಯಾನಿಕ್, ದಿವಂಗತ ನಾಮದೇವ ಬಾಸುತ್ಕರ್, ಶೇಷಯ್ಯ ಐನಾಪೂರ, ನಾರಾಯಣರಾವ ಸೂರ್ಯವಂಶಿ, ವೆಂಕಟಯ್ಯಶೆಟ್ಟಿ ಚಂದಾಪೂರ, ಬಸವರಾಜ ಕಡಗಂಚಿ, ನಾರಾಯಣರಾವ ಸೂರ್ಯವಂಶಿ, ರಾಜೇಂದ್ರ ಸುಣಗಾರ, ಮಹಾದೇವ ಹಲಕರ್ಟಿ ಕರಸೇವಕರಾಗಿ ತೆರಳಿದಾಗ ಕಾಶಿಯಲ್ಲೇ ಇವರೆಲ್ಲರನ್ನೂ ಪೊಲೀಸರು ಬಂಧಿಸಿದ್ದರು. ನಿರಂತರ 10 ದಿನಗಳ ಕಾಲ ಸೆರೆವಾಸ ಅನುಭವಿಸಿದ ನಂತರ ಅಯೋಧ್ಯೆಗೆ ತೆರಳಿ ರಾಮಜನ್ಮಭೂಮಿಯ ದರ್ಶನ ಪಡೆದು ಹಿಂದಿರುಗಿದ್ದರು.
ತದನಂತರ 1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿ ನೆಲಸಮವಾದಾಗ ಹಿರಿಯ ಸಾಹಿತಿ ದಿವಂಗತ ವೀರಭದ್ರ ಮಾಮನಿ, ಸತೀಶ ಐನಾಪೂರ, ಸತೀಶ ಪಾಟೀಲ, ರಾಜೇಂದ್ರ ಸುಣಗಾರ, ಪಾಂಡುರಂಗ ಜಡಾಲ ನಿಡಗುಂದಾ, ನಾಗರೆಡ್ಡಿ ತುಳೇರ, ರತ್ನಮಾಲಾ ಪ್ರಕಾಶ ಕುಲಕರ್ಣಿ, ಶಾರದಾಬಾಯಿ ದೇಶಕ, ಮಹಾನಂದಾ ನಾಗೂರೆ, ರೇಣುಕಾ ತಾಡೇಪಲ್ಲಿ, ಅನೀತಾ ವನಮಾಲಿ ಅಯೋಧ್ಯೆಗೆ ತೆರಳಿದ್ದರು.
ಈಗ ದಶಕಗಳ ಕನಸು ಈಡೇರುವ ಕಾಲ ಬಂದಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಿಸುವ ಸಂಕಲ್ಪ ಹೊತ್ತು ರಾಮಭಕ್ತರು ಮನೆಗಳಲ್ಲೇ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ, ಆಚರಿಸಲು ನಿರ್ಧರಿಸಿದ್ದಾರೆ. ಅಲ್ಲದೆ ರಾಮನ ಸೇವೆಗೆ ಪಾತ್ರವಾಗಿರುವುದಕ್ಕೆ ಹೆಮ್ಮೆ ಪಡುತ್ತಿದ್ದಾರೆ.