ಕಲಬುರಗಿ: ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆಗೆ ಯತ್ನಿಸಿರುವ ಭಯಾನಕ ಘಟನೆ ನಗರದ ಐವಾನ್ ಶಾಹಿ ರಸ್ತೆಯ ಕೆಕೆಆರ್‌ಡಿಬಿ ಕಚೇರಿ ಮುಂಭಾಗ ಶುಕ್ರವಾರ ನಡೆದಿದೆ.
ನಗರದ ಆರ್ಟಿಓ ಕ್ರಾಸ್ ಜಗಜೀವನರಾಮ್ ಬಡಾವಣೆಯ ನಿವಾಸಿ ಬಸವರಾಜ ದುಷ್ಕರ್ಮಿಗಳ ಹಲ್ಲೆಗೆ ಒಳಗಾದ ವ್ಯಕ್ತಿ. ಈತ ರೈಲ್ವೆ ಇಲಾಖೆಯಲ್ಲಿ ಹೌಸ್ ಕೀಪಿಂಗ್ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಧ್ಯಾಹ್ನ ಊಟದ ಸಮಯಕ್ಕೆ ಬೈಕ್ ಮೇಲೆ ಹೊರಟಿರುವಾಗ ದಿಢೀರ್ ದಾಳಿ ಮಾಡಿದ ದುಷ್ಕರ್ಮಿಗಳು, ಬಸವರಾಜನ ತಲೆ, ಎದೆ ಹಾಗೂ ದೇಹದ ಇತರೆ ಭಾಗಗಳಲ್ಲಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೆ ಯತ್ನಿಸಿದ್ದಾರೆ. ಬಳಿಕ ತೀವ್ರ ರಕ್ತಸ್ರಾವದಿಂದ ಬಳಲುತ್ತಿರುವ ಬಸವರಾಜನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಹಲ್ಲೆಗೊಳಗಾದ ಬಸವರಾಜ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳಕ್ಕೆ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.