ಕಲಬುರಗಿ: ರಸ್ತೆಗಳಲ್ಲಿ ರಿವಾಲ್ವರ್, ಮಾರಕಾಸ್ತ್ರಗಳನ್ನ ಹಿಡಿದುಕೊಂಡು ಸಾರ್ವಜನಿಕರನ್ನ ಹೆದರಿಸಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ ಗ್ಯಾಂಗ್ ಬಂಧಿಸುವಲ್ಲಿ ಜಿಲ್ಲಾ ಸಿಟಿ ಕ್ರೈಂ ಬ್ರ್ಯಾಂಚ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಗ್ಯಾಂಗ್ನಲ್ಲಿ ಇಪ್ಪತ್ತೊಂದು ಜನ ಸದಸ್ಯರಿದ್ದಾರೆ. ಸಿದ್ದಣ್ಣ ಬೆಳಮಗಿ, ರಾಹುಲ್ ಕವಟಗಿ, ರಘು ಕಲಕೇರಿ, ನಿತಿನ್ ಪಾಟೀಲ, ಅಕಾಶ್ ಮಾಡಬೂಳ, ಮುರಳಿ, ಪ್ರಶಾಂತ್ ಐಗೋಳ, ಅಭಿಷೇಕ್, ಶಿವಲಿಂಗೇಶ್ವರ ತಳವಾರ, ಕೃಷ್ಣ ಪವಾರ್, ಆಕಾಶ್ ಹಲಕಟ್ಟಿ, ವಿಶಾಲ್ ರಾಠೋಡ, ಕಾರ್ತೀಕ್, ಪೃಥ್ವಿ, ಮಿಥನ್ ಜಾಧವ್, ಸಂದೀಪ್ ಚವ್ಹಾಣ ಮತ್ತಿತರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲರೂ 20 ರಿಂದ 30 ವರ್ಷದೊಳಗಿನ ವಯೋಮಾನದವರಾಗಿದ್ದಾರೆ. ಬಂಧಿತರಿಂದ ಕಾರು, ಮೊಬೈಲ್, ಬಂದೂಕು, ಚಾಕು, ಚೂರಿ, ಬಡಿಗೆ, ಬ್ಯಾಟ್ ಮತ್ತು ಇತರೆ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು ಚಿಕ್ಕ ವಯಸ್ಸಿನಲ್ಲಿಯೇ ಪಾತಕ ಲೋಕದ ಡಾನ್ ಆಗಲು ಹೊರಟಿದ್ದರಂತೆ. ಮಾರಕಾಸ್ತ್ರಗಳನ್ನ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಜನರು ಹೆದರುವಂತೆ ಮಾಡಿದ್ದರಂತೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರೋ ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಂಧಿತ ಆರೋಪಿಗಳು ಸೇರಿ ಸುಮಾರು 500 ಪುಡಿ ರೌಡಿಗಳ ವಿರುದ್ಧ ರೌಡಿ ಶೀಟರ್ ಖಾತೆ ತೆಗೆಯೋದಾಗಿ ಡಿಸಿಪಿ ಕಿಶೋರ್ ಬಾಬು ಮಾಹಿತಿ ನೀಡಿದ್ದಾರೆ.