ಕಲಬುರಗಿ: ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆಗೈದು ನಂತರ ರೈಲ್ವೇ ಹಳಿಯಲ್ಲಿ ಹಾಕಿ ಇದೊಂದು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದ ಮಹಿಳೆ ಸೇರಿ 7 ಜನ ಆರೋಪಿಗಳನ್ನು ವಾಡಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಕೊಲೆಗೆ ಸುಪಾರಿ ನೀಡಿದ್ದ ಮಹಾನಂದ ಉಳ್ಳೆ, ಮಾರುತಿ ಪರಿಟ್, ಅಶೋಕ್ ತಿಮ್ಮಯ್ಯ, ಸುನಿಲ್ ಅಲಿಯಾಸ್ ಮಂಜ್ಯಾ, ಸೂರ್ಯಕಾಂತ, ಅಂಬರೀಶ್ ಪರಿಟ್ ಹಾಗೂ ಓರ್ವ ಅಪ್ರಾಪ್ತ ಬಾಲಕನ ಬಂಧಿತರು.
ಏನಿದು ಘಟನೆ?
ಕಳೆದ ಸೆ. 06 ರಂದು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಮನೆಯಿಂದ ಸನಬೀರಸಿಂಗ್ ಎಂಬಾತನನ್ನು ಕರೆದೊಯ್ದು ಕಲಬುರಗಿ ತಾಲೂಕಿನ ಸಾವಳಗಿ ಬಳಿ ಹಗ್ಗದಿಂದ ಬಿಗಿದು ಕೊಲೆಗೈದಿದ್ದರು. ನಂತರ ಇದೊಂದು ಕೊಲೆ ಅಂತ ಬಿಂಬಿಸಲು ದೇಹವನ್ನು ಹಳಿ ಮೇಲೆ ಹಾಕಿ ದೇಹ ಎರಡು ತುಂಡಾಗುವಂತೆ ಮಾಡಿದ್ದರು. ಅನುಮಾನಗೊಂಡ ರೈಲ್ವೆ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕೊಲೆ ಯಾಕೆ?
ಕೊಲೆಯಾದ ಸನಬೀರಸಿಂಗ್ ಹಾಗೂ ಆತನ ಕುಟುಂಬಸ್ಥರು ಕಲಬುರಗಿಯ ಮಹಾನಂದಾ ಎಂಬ ಮಹಿಳೆ ಮನೆಯಲ್ಲಿ ಬಾಡಿಗೆ ಇದ್ದರು. ಆದ್ರೆ ಮಹಾನಂದಾಳ ಯಾವುದೋ ಒಂದು ವಿಷಯದ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡ ಸನಬೀರಸಿಂಗ್ ಆಕೆಗೆ ಬಾಡಿಗೆ ಕೊಡುವ ಬದಲು ಆಕೆಯಿಂದಲೇ ಹಣ ವಸೂಲಿಗೆ ಮುಂದಾಗಿದ್ದ. ಇದರಿಂದ ಬೇಸತ್ತಿದ್ದ ಮಹಿಳೆ ಸನಬೀರಸಿಂಗ್ ಮುಗಿಸಲು ಪ್ಲಾನ್ ಮಾಡಿದ್ದಾಳೆ. ತಾನಂದುಕೊಂಡಂತೆ 5 ಲಕ್ಷ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾಳೆ.