ಕಲಬುರಗಿ: ರಸ್ತೆ ಮೇಲೆ ದೊರೆತ ದುಬಾರಿ ಸ್ಮಾರ್ಟ್ ಫೋನ್ ಹಾಗೂ ಎರಡು ಎಟಿಎಂ ಕಾರ್ಡ್ಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸುವ ಮೂಲಕ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ನೀಲಮ್ಮ ಶಿರವಾಳ ಪ್ರಾಮಾಣಿಕತೆ ತೋರುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಮರವಾಡಿ ಗ್ರಾಮದಿಂದ ವಾಡಿಗೆ ಬಸ್ ನಿಲ್ದಾಣ ಬಳಿ ಆಟೋದಲ್ಲಿ ಬಂದಿಳಿದ ನೀಲಮ್ಮ ಅವರಿಗೆ ರಸ್ತೆ ಮೇಲೆ ದುಬಾರಿ ಸ್ಮಾರ್ಟ್ ಫೋನ್ ಹಾಗೂ ಎರಡು ಎಟಿಎಂ ಕಾರ್ಡ್‍ಗಳು ಸಿಕ್ಕಿವೆ. ತಡ ಮಾಡದೇ ಸ್ಥಳೀಯ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ನೀಲಮ್ಮ ಅವರ ಪ್ರಾಮಾಣಿಕ ಕಾರ್ಯಕ್ಕೆ ವಾಡಿ ಠಾಣೆಯ ಪಿಎಸ್‍ಐ ದಿವ್ಯಾ ಮಹಾದೇವ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಬಳಿಕ ಎಟಿಎಂ ಮತ್ತು ಸ್ಮಾರ್ಟ್ ಫೋನ್ ಕಳೆದುಕೊಂಡಿದ್ದ ಕಿಶನ್ ಚೌವ್ಹಾಣ ಎಂಬುವರನ್ನು ಪತ್ತೆ ಮಾಡಿ ಅವರಿಗೆ ತಲುಪಿಸಿದ್ದಾಗಿ ಪಿಎಸ್ಐ ದಿವ್ಯಾ ಮಹಾದೇವ ತಿಳಿಸಿದ್ದಾರೆ.