ಕಲಬುರಗಿ: ಇಂಗ್ಲೆಂಡ್ನವರು ದೇಶ ಬಿಟ್ಟು ಹೋದ್ರು, ಅದೇ ಪದ್ದತಿ ಕಾಂಗ್ರೆಸ್ ಪಕ್ಷ ಮುಂದುವರೆಸಿಕೊಂಡು ಹೋಗ್ತಿದೆ ಎಂದು ಹೆಚ್ಡಿಕೆ ಟೀಕೆಯ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಜೆಡಿಎಸ್ ಪಕ್ಷಕ್ಕೆ ಅಸ್ತಿತ್ವವೇ ಇಲ್ಲ, ಕುಮಾರಸ್ವಾಮಿ ಅಸ್ತಿತ್ವ ಉಳಿಸಿಕೊಳ್ಳೋಕೆ ಈ ರೀತಿ ಮಾತಾಡ್ತಿದ್ದಾರೆ. ಅವರೇನು ವಿರೋಧ ಪಕ್ಷದ ನಾಯಕ ಆಗಬೇಕು ಅಂತಿದ್ದಾರಾ? ಎಂದು ತಿರುಗೇಟು ನೀಡಿದ್ದಾರೆ.
ಕಲಬುರಗಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಾನು ಆ ಸರ್ಕಾರದಲ್ಲಿ ಸಚಿವನಾಗಿದ್ದೆ. ಆಗ ಅವರು ಪ್ರೋಗ್ರೆಸ್ಸಿವ್ ಬಗ್ಗೆ ಮಾತನಾಡುತ್ತಿದ್ದವರು. ಈಗ ಯಾಕೆ ಹೀಗಾಗಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ಹಾಗೂ ಜೆಡಿಎಸ್ಗೆ ಇಲ್ಲ ಎಂದರು.
ಆರಗ ಜ್ಞಾನೇಂದ್ರ ಹೇಳಿಕೆ ವಿಚಾರ : ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ಷೇಪಾರ್ಹ ಹೇಳಿಕೆ ವಿಚಾರವಾಗಿ ಸಚಿವ ಖರ್ಗೆ ಮಾತನಾಡಿ, ಅದು ಖರ್ಗೆ ಅವರಿಗೆ ಮಾಡಿದ ಅವಮಾನ ಅಲ್ಲ, ಹಿಂದುಳಿದವರಿಗೆ ಮಾಡಿದ ಅವಮಾನ. ಇದು ಕೇಶವ ಕೃಪಾದ ಬುದ್ದಿ, ಆರಗ ಜ್ಷಾನೇಂದ್ರ ಬಗ್ಗೆ ನನಗೆ ಈ ಮುಂಚೆ ಅಪಾರ ಗೌರವ ಇತ್ತು. ಆದ್ರೆ ಈಗ ಅವರ ಮೇಲಿನ ಗೌರವ ಕಡಿಮೆಯಾಗಿದೆ ಎಂದು ಟೀಕಿಸಿದರು.
ಶಾಸಕ ಬಸವರಾಜ ರಾಯರೆಡ್ಡಿ, ಸಚಿವರ ಹಾಗೂ ಶಾಸಕರ ನಡುವೆ ಹೊಂದಾಣಿಕೆ ಇಲ್ಲ ಎನ್ನುವ ಮಾತಿಗೆ ಪ್ರತಿಕ್ರಿಯಿಸಿ, ಅವರು ಹಿರಿಯರು ಯಾಕೆ ಹೀಗೆ ಹೇಳಿದರೋ ಗೊತ್ತಾಗುತ್ತಿಲ್ಲ. ನಾನು ಸಚಿವನಾಗಿ ಅವರು ಹೇಳಿದ ಕೆಲಸ ಮಾಡಿಕೊಟ್ಟಿದ್ದೇನೆ. ಹಿರಿಯರಾದ ಅವರಿಂದ ಅಭಿವೃದ್ಧಿ ಪೂರಕ ಸಲಹೆ ಸೂಚನೆಗಳನ್ನು ಪಡೆದಿದ್ದೇನೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ಇತರೆ ಯೋಜನೆಗಳಿಗೆ ಅನುದಾನದ ಕೊರತೆ ಎದುರಾಗಲಿದೆ ಎಂದು ಕೇಳಲಾದ ಪ್ರಶ್ನೆಗೆ, ಅವರು ಜನರಿಗೆ ಅಗತ್ಯ ಯೋಜನೆಗಳ ಜಾರಿಗೆ ಬೇಕಾಗುವಷ್ಟು ಅನುದಾನವನ್ನು ಈಗಾಗಲೇ ತೆಗೆದಿರಿಸಲಾಗಿದೆ. ಯಾವುದೇ ಪ್ರಮುಖ ಯೋಜನೆಗಳಿಗೆ ಗ್ಯಾರಂಟಿಗಳಿಂದ ಆರ್ಥಿಕವಾಗಿ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇತ್ತೀಚೆಗೆ ಮಳೆ ಬಂದ ಸಂದರ್ಭದಲ್ಲಿ ಕಲಬುರಗಿ ನೀರಿನ ಕುಳಗಳಲ್ಲಿ ಬಿದ್ದು ಇಬ್ಬರು ಬಾಲಕರು ಮುಳುಗಿ ಮೃತಪಟ್ಟಿರುವುದು ಕಾಮಗಾರಿ ಗುತ್ತಿಗೆ ಪಡೆದಿರುವ ಎಲ್ ಅಂಡ್ ಟಿ ಕಂಪನಿ ಹಾಗೂ ಕಾರ್ಪೊರೇಷನ್ ಜೊತೆಗೆ ನಾನೂ ಕೂಡಾ ಜವಾಬ್ದಾರನಾಗಿದ್ದೇನೆ. ಈ ಬಗ್ಗೆ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ ಎಲ್ ಅಂಡ್ ಟಿ ಕಂಪನಿಯ ಕಡೆಯಿಂದ ಪರಿಹಾರ ಕೊಡಿಸಲಾಗಿದೆ. ಇತರೆ ಸರ್ಕಾರಿ ಕಾಮಗಾರಿ ನಡೆಯುತ್ತಿರುವಲ್ಲಿ ಈ ರೀತಿ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಅಫಜಲ್ಪುರ ತಾಲೂಕಿನ ಅವರಾದ (ಕೆ) ಗ್ರಾಮವನ್ನು ನೆರೆಪೀಡಿತ ಗ್ರಾಮ ಎಂದು ಪರಿಗಣಿಸಿ ಸ್ಥಳಾಂತರ ಮಾಡಲಾಗಿದೆ. ಆದರೆ ಅಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವ ಕುರಿತು ಶಾಸಕರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಈ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂಓದಿ: Shakti Yojana: ಪ್ರತಿದಿನ ಶೇ.1ರಷ್ಟು ಶಕ್ತಿ ಯೋಜನೆ ದುರ್ಬಳಕೆ- ಸಚಿವ ರಾಮಲಿಂಗಾ ರೆಡ್ಡಿ