ಕಲಬುರಗಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಶೇ. 40ರಷ್ಟು ಭ್ರಷ್ಟ ಸರಕಾರ. ಈ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಜನರಿಗೆ ಕರೆ ಕೊಟ್ಟರು. ಬುಧವಾರ ಸಂಜೆ ಕಲಬುರಗಿ ನಗರದಲ್ಲಿ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ ಹಾಗೂ ಉತ್ತರ ಕ್ಷೇತ್ರದ ಅಭ್ಯರ್ಥಿ ಖನೀಜ್ ಫಾತೀಮಾ ಪರ ಪ್ರಚಾರ ಮಾಡಿದ ಅವರು, ನಗರದ ಜಗತ್ ಸರ್ಕಲ್ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ದೇಶದಲ್ಲಿ ಬೆಲೆ ಏರಿಕೆ ಮಾಡಿ ಪ್ರಾಣ ಹಿಂಡುತ್ತಿರುವ ಕೇಂದ್ರ ಸರಕಾರ ಬಡವರ ಪರವಾಗಿಲ್ಲ. ಅದಾನಿ, ಅಂಬಾನಿಯವರ ಪರವಾಗಿದೆ ಎಂದು ಟೀಕಿಸಿದರು. ಕರ್ನಾಟಕ ರಾಜ್ಯವನ್ನು ಅಭಿವೃದ್ಧಿ ಮಾಡುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಆದರೆ ಸರ್ವಜ್ಞಾನಿ ಆಗಿರುವ ಮೋದಿ ಅಭಿವೃದ್ಧಿ ಮಾಡಿದ್ದಾರೆಯೇ? ರಾಜ್ಯದಲ್ಲಿ ಕಮಿಷನ್ ಹೆಸರಿನಲ್ಲಿ ಬಿಜೆಪಿ ಲೂಟಿ ಹೊಡೆದಿದೆ. ಇದ್ಯಾವುದೂ ನಿಮಗೆ ಕಾಣಿಸಲಿಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿ ಅಧಿಕಾರಕ್ಕೆ ತನ್ನಿ. ನಾವು ಅಭಿವೃದ್ಧಿ ಮಾಡಿ ತೋರಿಸುತ್ತೇವೆ. ಈ ಹಿಂದೆ ರಾಜ್ಯದಲ್ಲಿ ನಮ್ಮ ಸರಕಾರವಿದ್ದಾಗ ಸಾಕಷ್ಟು ಅಭಿವೃದ್ಧಿ ಮಾಡಿದ್ದೆವು. ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಮುಂದೆಯೂ ರಾಜ್ಯದ ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ಕೊಟ್ಟರು.
ರೋಡ್ ಶೋ: ಇತ್ತೀಚೆಗೆ ಕಲಬುರಗಿ ನಗರದಲ್ಲಿ ಪ್ರಧಾನಿ ಮೋದಿ 6 ಕಿ.ಮೀ ದೂರ ಬೃಹತ್ ರೋಡ್ ಶೋ ನಡೆಸಿ ಮತಬೇಟೆ ಮಾಡಿದ್ದರು. ಇದರ ಬೆನ್ನಲ್ಲೇ ಪ್ರಿಯಾಂಕಾ ವಾದ್ರಾ ಕೂಡಾ ಬೃಹತ್ ರೋಡ್ ಶೋ ನಡೆಸಿದ್ದಾರೆ. ಬುಧವಾರ ಸಂಜೆ ನಗರದ DAR ಮೈದಾನದ ಹೆಲಿಪ್ಯಾಡ್ಗೆ ಆಗಮಿಸಿದ್ದ ಪ್ರಿಯಾಂಕಾ ರಸ್ತೆ ಮೂಲಕ ನಗರೇಶ್ವರ ಸ್ಕೂಲ್‌ಗೆ ಆಗಮಿಸಿ ರೋಡ್ ಶೋ ಪ್ರಾರಂಭಿಸಿದರು. ಹೂಮಳೆ ಸುರಿದು ಕೈ ಕಾರ್ಯಕರ್ತರು, ಅಭಿಮಾನಿಗಳು ಸ್ವಾಗತ ನೀಡಿದರು. ನಗರೇಶ್ವರ ಸ್ಕೂಲ್ನಿಂದ ಕಿರಾಣಾ ಬಜಾರ್, ಭಾಂಡೆ ಬಜಾರ್, ಸೂಪರ್ ಮಾರ್ಕೆಟ್ ಮಾರ್ಗವಾಗಿ ಜಗತ್ ವೃತ್ತದವರೆಗೆ ಸುಮಾರು 3.5 ಕಿಮೀ ಒಂದೂವರೆ ಗಂಟೆಗಳ ಕಾಲ ರೋಡ್ ಶೋ ನಡೆಸಿ ಮತಬೇಟೆ ಮಾಡಿದರು.
ರಾರಾಜಿಸಿದ ಕಟೌಟ್‌ಗಳು: ಕಲಬುರಗಿಯ 9 ಕ್ಷೇತ್ರಗಳನ್ನ ಟಾರ್ಗೆಟ್ ಮಾಡಿಕೊಂಡು ಪ್ರಿಯಾಂಕಾ ವಾದ್ರಾ ಮತ ಪ್ರಚಾರ ಕೈಗೊಂಡರು. ರೋಡ್ ಶೋ ಮಾರ್ಗದುದ್ದಕ್ಕೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ವಾದ್ರಾ ಕಟೌಟ್‌ಗಳು, ಬಾವುಟಗಳು ರಾರಾಜಿಸಿದವು. ರೋಡ್ ಶೋ ಬಳಿಕ ಜಗತ್ ವೃತ್ತದಲ್ಲಿ ಸಮಾವೇಶ ನಡೆಯಿತು. ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಇಂದು ಅಮಿತ್ ಶಾ ಆಗಮನ: ಕಲಬುರಗಿ ಜಿಲ್ಲೆಯಲ್ಲಿಂದು ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಮತಬೇಟೆಗೆ ಆಗಮಿಸುತ್ತಿದ್ದಾರೆ. ವಿಶೇಷ ವಿಮಾನದ ಮೂಲಕ ಮಧ್ಯಾಹ್ನ 3:30 ಕ್ಕೆ ಕಲಬುರಗಿ ಏರ್ಪೋರ್ಟ್ಗೆ ಆಗಮಿಸುವ ಶಾ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಜೇವರ್ಗಿಗೆ ತೆರಳಿ ಸಂಜೆ 4 ಗಂಟೆಗೆ ಜೇವರ್ಗಿಯಲ್ಲಿ ಪ್ರಚಾರದಲ್ಲಿ ಭಾಗಿಯಾಗುವರು.
5:30ಕ್ಕೆ ಅಫಜಲಪುರದಲ್ಲಿ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್ ಪರ ಬಹಿರಂಗ ಸಮಾವೇಶದಲ್ಲಿ ಮತಯಾಚನೆ ಮಾಡಲಿದ್ದಾರೆ. ಆ ಬಳಿಕ ಕಲಬುರಗಿ ನಗರಕ್ಕೆ ಆಗಮಿಸಿ ವಾಸ್ತವ್ಯ ಹೂಡುವರು. ರಾತ್ರಿ ಕಲಬುರಗಿ ನಗರದ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಪ್ರಮುಖರ ಜೊತೆ ಸಭೆ ನಡೆಸಲಿದ್ದು, ಚುನಾವಣೆ ರಣತಂತ್ರ ಹೆಣೆಯಲಿದ್ದಾರೆ.
ಕಾಂಗ್ರೆಸ್, ಬಿಜೆಪಿಯ ಘಟಾನುಘಟಿ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕಲ್ಯಾಣ ಕರ್ನಾಟಕದಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. ಈ ಭಾಗದ 41 ವಿಧಾನಸಭೆ ಕ್ಷೇತ್ರಗಳ ಪೈಕಿ ಬಹುತೇಕವುಗಳನ್ನು ಗೆಲ್ಲಲು ಎರಡೂ ಪಕ್ಷಗಳು ಶತಪ್ರಯತ್ನ ಮಾಡ್ತಿದ್ದಾರೆ.
ಇದನ್ನೂ ಓದಿ: ಮೋದಿ ಕ್ರೈಯಿಂಗ್ ಬೇಬಿ, ಬೆಳಗ್ಗೆಯಿಂದ ಸಂಜೆವರೆಗೆ ಅಳುವುದೇ ಕೆಲಸ: ಖರ್ಗೆ ವ್ಯಂಗ್ಯ