ಕಲಬುರಗಿ: ಹಾಡಹಗಲೇ ಮಾರಕಾಸ್ತ್ರ ಹಿಡಿದು ಬೆನ್ನಟ್ಟಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ವಕೀಲರೊಬ್ಬರನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಕಲಬುರಗಿ ನಗರದ ಸಾಯಿ ಮಂದಿರ ಸಮೀಪದ ಅಪಾರ್ಟ್ಮೆಂಟ್ ಬಳಿ ನಡೆದಿದೆ. ಈರಣ್ಣಗೌಡ ಪಾಟೀಲ ಉದನೂರ (40) ಕೊಲೆಗೀಡಾದ ವಕೀಲ.
ನ್ಯಾಯಾಲಯಕ್ಕೆ ಹೋಗುವ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರ ಹಿಡಿದು ಹೊಂಚುಹಾಕಿ ಬೆನ್ನಟ್ಟಿ ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದಾರೆ. ಬೆನ್ನಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆಸ್ತಿ ವಿಚಾರವಾಗಿ ಸಂಬಂಧಿಯೇ ಕೊಲೆ ಮಾಡಿದ್ದಾನೆಂದು ಮೃತನ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ಕಮಿಷನರ್ ಚೇತನ್ ಆರ್ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹಂತಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ವಕೀಲ ಈರಣ್ಣಗೌಡ ಭೀಕರ ಹತ್ಯೆ ಖಂಡಿಸಿ ಕಲಬುರಗಿಯಲ್ಲಿ ವಕೀಲರು ಬೃಹತ್ ಪ್ರತಿಭಟನೆ ನಡೆಸಿದರು. ಜಿಲ್ಲಾ ನ್ಯಾಯಾಲಯದಿಂದ ಎಸ್ವಿಪಿ ವೃತ್ತದವರಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾನಿರತ ವಕೀಲರು, ವಕೀಲ ಈರಣ್ಣ ಗೌಡ ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿದರು.
ಇದನ್ನೂ ಓದಿ: ಸ್ನೇಹಿತನ ಹಣ ಕೊಡಿಸಲು ಹೋದ ವ್ಯಕ್ತಿಯ ಕೊಲೆ: ಆರೋಪಿ ಪರಾರಿ