ಕಲಬುರಗಿ: ಹೆಚ್ಕೆಇ ಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಸಹೋದ್ಯೋಗಿಗಳು ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಲಬುರಗಿ ನಗರದ ಪ್ರಸಿದ್ಧ ಪಿಡಿಎ ಇಂಜಿನಿಯರಿಂಗ್ ಕಾಲೇಜು ಸಿಬ್ಬಂದಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸೆಕ್ಯೂರಿಟಿ ಗಾರ್ಡ್ ಗಂಭೀರ ಆರೋಪ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡ ಈ ಮಹಿಳೆ ಮ್ಯಾನ್ ಪವರ್ ಏಜೆನ್ಸಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ.
ಒಂಟಿ ಮಹಿಳೆ ಎನ್ನುವ ಕಾರಣಕ್ಕೆ ಪಿ.ಡಿ.ಎ. ಕಾಲೇಜಿನ ಬೀರಪ್ಪ, ಸೂರ್ಯಕಾಂತ, ಸೆಕ್ಯೂರಿಟಿ ಸೂಪರ್ ವೈಸರ್ ಬಸವರಾಜ್ ಎಂಬುವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದ್ದು, ಇವರ ವಿರುದ್ಧ ದೂರು ದಾಖಲಿಸುವುದಾಗಿ ಸಂತ್ರಸ್ತೆ ತಿಳಿಸಿದ್ದಾರೆ.
ಈಗಾಗಲೇ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಲಾಗಿದ್ದು, ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿದ್ದಾರೆ. ಜೊತೆಗೆ ಮಹಿಳೆಯ ಬೆಂಬಲಕ್ಕೆ ಕಾರ್ಮಿಕ ಇಲಾಖೆ ಮಧ್ಯ ಪ್ರವೇಶ ಮಾಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೋಷಿಯಲ್ ಎವಿಲ್ ಎರಾಡಿಕೇಶನ್ ಫೌಂಡೇಶನ್ ಒತ್ತಾಯಿಸಿದೆ.