ಕಲಬುರಗಿ: ಕೊರೊನಾ ಸೋಂಕಿನಿಂದ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ತನ್ನ ತಾಯಿಗೆ ಆಕ್ಸಿಜನ್ ಒದಗಿಸಿಕೊಡಿ ಎಂದು ದೇಶ ಕಾಯುವ ಸೈನಿಕನೋರ್ವ ಕಣ್ಣೀರು ಹಾಕಿದ್ದಾರೆ.
ಕಲಬುರಗಿ ತಾಲೂಕಿನ ಪಾಣೆಗಾಂವ್ ಗ್ರಾಮದ ಸಂಜೀವ್ ರಾಠೋಡ್, ತನ್ನ ತಾಯಿಗಾಗಿ ಕಣ್ಣೀರು ಹಾಕಿರುವ ಯೋಧ. ಸಿಆರ್ಪಿಎಫ್ ಯೋಧನಾಗಿರುವ ಸಂಜೀವ ಸದ್ಯ ಕಾಶ್ಮೀರ ಗಡಿ ಕಾಯುತ್ತಿದ್ದಾರೆ. ಅಲ್ಲಿಂದಲೇ ವಿಡಿಯೋ ಮಾಡಿ ತನ್ನ ತಾಯಿಯ ಸಹಾಯಕ್ಕೆ ಯಾರಾದರೂ ಮುಂದೆ ಬನ್ನಿ ಅಂತ ಪರಿಪರಿಯಾಗಿ ಬೇಡಿಕೊಂಡು ಕಣ್ಣೀರು ಹಾಕಿದ್ದಾರೆ.
ಕಳೆದ 15 ವರ್ಷಗಳಿಂದ ದೇಶ ಸೇವೆಯಲ್ಲಿರುವ ಸೈನಿಕ ಸಂಜೀವ್ ಅವರ ತಾಯಿಗೆ ನಾಲ್ಕು ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿದೆ. ಪಾಣೆಗಾಂವ್ ಗ್ರಾಮದ ಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿದ್ದು, ದಿನದಿಂದ ದಿನಕ್ಕೆ ಸ್ಯಾಚುರೇಷನ್ ಕಡಿಮೆಯಾಗಿ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ.
ಯಾವುದೇ ಆಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್ ಸಿಗದ ಕಾರಣ ಅಸಹಾಯಕತೆಯಿಂದ ಕಾಶ್ಮೀರದಿಂದಲೇ ಆಕ್ಸಿಜನ್ ಗಾಗಿ ಮನವಿ ಮಾಡಿ ಕಣ್ಣೀರಿಟ್ಟಿದ್ದಾರೆ. ಯಾರಾದರೂ ನನ್ನ ತಾಯಿಗೆ ಆಕ್ಸಿಜನ್ ವ್ಯವಸ್ಥೆ ಮಾಡಿ, ಬದುಕಿಸಿಕೊಡಿ ನನ್ನ ಜೀವನದ ಕೊನೆಯ ಉಸಿರಿರುವರೆಗೆ ನಿಮಗೆ ಋಣಿಯಾಗಿರುತ್ತೇನೆಂದು ಕೈಮುಗಿದಿದ್ದಾರೆ.