ಕಲಬುರಗಿ: ಆತ ತಾನಾಯಿತು ತನ್ನ ಕೆಲಸವಾಯಿತು ಅಂತಾ ಪೆಂಟಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ನಿತ್ಯ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಾನೆಂದು ಹೆತ್ತವರು ದಾರಿ ಕಾಯುತ್ತಿದ್ದರು. ಅಷ್ಟರಲ್ಲಿ ಬಂದ ಆ ಒಂದು ಕರೆ ಇಡೀ ಕುಟುಂಬವೇ ಕಣ್ಣಿರಲ್ಲಿ ತೇಲುವಂತೆ ಮಾಡಿದೆ.
ನಾಗರಾಜ್ ಮಟಮಾರಿ (28) ಕೊಲೆಯಾದ ಯುವಕ. ಕಲಬುರಗಿ ನಗರದ ಗಾಜಿಪುರ ಬಡಾವಣೆಯ ನಾಡಿಕರ್ಗಲ್ಲಿ ನಿವಾಸಿಯಾಗಿರೋ ನಾಗರಾಜ್ ಮಟಮಾರಿ ಜೀವನಕ್ಕಾಗಿ ಕಟ್ಟಡಗಳ ಪೆಂಟಿಂಗ್ ಕೆಲಸ ಮಾಡುತ್ತಿದ್ದ. ಎಂದಿನಂತೆ ಪೆಂಟಿಂಗ್ ಕೆಲಸಕ್ಕೆ ಹೋಗಿದ್ದ ನಾಗರಾಜ್‌ನ ಮೃತದೇಹ ಕೆರೆಭೋಸ್ಗಾ ಕ್ರಾಸ್ ಬಳಿ ಜಮೀನುವೊಂದರಲ್ಲಿ ಪತ್ತೆಯಾಗಿದೆ.
ದುಷ್ಕರ್ಮಿಗಳು ತಲೆ ಮೇಲೆ ಕಲ್ಲುಎತ್ತುಹಾಕಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ ವೈಎಸ್ ರವಿಕುಮಾರ್, ಡಿಸಿಪಿ ಅಡ್ಡೂರು ಶ್ರೀನಿವಾಸುಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಮಾತನಾಡಿದ ಡಿಸಿಪಿ ಅಡ್ಡೂರು ಶ್ರೀನಿವಾಸುಲು, ಜುಲೈ 27 ರಂದು ಹೊರಗೆ ಹೋಗಿ ಬರ್ತಿನಿ ಅಂತಾ ಹೇಳಿ ಹೋದವ ವಾಪಸ್ ಬಂದಿಲ್ಲ.
ಆದರೆ, ನಿನ್ನೆ ಕೆರೆಭೋಸ್ಗಾ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ ಅಂತಾ ಡಿಸಿಪಿ ಶ್ರೀನಿವಾಸುಲು ಹೇಳಿದರು. ಭೀಕರವಾಗಿ ಕೊಲೆಯಾಗಿರೋ ನಾಗರಾಜ್‌ನಿಗೆ ಕುಡಿಯೋ ಚಟವಿತ್ತು.. ದಿನಾಲು ಕೆಲಸ ಮುಗಿಸಿಕೊಂಡು ಸ್ನೇಹಿತರ ಜೊತೆ ಕಂಠಪೂರ್ತಿ ಕುಡಿಯುತ್ತಿದ್ದನಂತೆ.
ಮನೆಯವರು ಹೇಳೋ ಪ್ರಕಾರ ನಾಗರಾಜ್‌ನಿಗೆ ಸ್ನೇಹಿತರ ಬಳಗವಿತ್ತು. ಆದರೆ, ಮನೆಗೆ ಯಾರನ್ನೂ ಸಹ ಕರೆದುಕೊಂಡು ಬರುತ್ತಿರಲಿಲ್ಲವಂತೆ ನಾಗಾರಾಜ್ ಕೊಲೆಯಾಗುವ ಮುನ್ನ ಮೊಬೈಲ್ ಅನ್ನು ತನ್ನ ತಾಯಿಯ ಅತ್ತಿಗೆಗೆ ಕೊಟ್ಟುಹೋಗಿದ್ದ. ನಂತರ ಅದೇ ದಿನ ನಾಗರಾಜ್‌ನ ನಂಬರ್‌ಗೆ ಆಕ್ಸಿಡೆಂಟ್ ಆಗಿದೆ ಎಂದು ಕರೆಬಂದಿದೆ.
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ನಾಗರಾಜ್‌ನ ಪ್ಯಾಂಟ್ ಕಿಸೆಯಲ್ಲಿ ಮದ್ಯದ ಪ್ಯಾಕೆಟ್ ಪತ್ತೆಯಾಗಿದೆ. ಮೇಲ್ನೋಟಕ್ಕೆ ಕೊಲೆಗೂ ಮುನ್ನ ಸ್ನೇಹಿತರ ಜೊತೆ ಭರ್ಜರಿ ಎಣ್ಣೆ ಪಾರ್ಟಿ ಆಗಿದ್ದು, ಸ್ನೇಹಿತರೇ ಕುಡಿದ ಮತ್ತಿನಲ್ಲಿ ನಾಗರಾಜ್ ಮಟಮಾರಿಯನ್ನ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ : ಮಕ್ಕಳ ಕಳ್ಳಸಾಗಣೆ ಪ್ರಕರಣ : ಪಾದ್ರಿ ಸೇರಿದಂತೆ ಇಬ್ಬರು ಸ್ಥಳೀಯರ ಬಂಧನ, 12 ಮಕ್ಕಳ ರಕ್ಷಣೆ